ದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ದೆಹಲಿ ನಿವಾಸದಿಂದ ಜಾರಿ ನಿರ್ದೇಶನಾಲಯದ ಅದಿಕಾರಿಗಳು ಕೆಲವು ದಾಖಲೆಗಳನ್ನು ಹಾಗೂ ಬಿಎಂಡಬ್ಲ್ಯು ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರು ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಅವರು ಅಕ್ರಮ ಹಣದಿಂದ ಖರೀದಿ ಮಾಡಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.
ಸರ್ಕಾರಿ ಭೂಮಿ ಮಾಲೀಕತ್ವ ಹಗರಣ ಸಂಬಂಧ ಸುಮಾರು 600 ಕೋಟಿ ರೂಪಾಯಿ ಹಗರಣ ಇದಾಗಿದೆ. ಈ ಸರ್ಕಾರಿ ಭೂಮಿಯನ್ನು ಬಿಲ್ಡರ್ ಗಳಿಗೆ ಮಾರಾಟ ಮಾಡಿರುವ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರಿಗೆ 7 ಬಾರಿ ನೊಟೀಸ್ ಜಾರಿಗೊಳಿಸಿತ್ತು.
ಆದರೆ, ಈ ನೊಟೀಸ್ ಗಳನ್ನು ಸೊರೇನ್ ನಿರ್ಲಕ್ಷ್ಯ ಮಾಡಿದ್ದು, ಜಾರಿ ನಿರ್ದೇಶನಾಲಯದ ಈ ಕ್ರಮದ ವಿರುದ್ಧ ಸೊರೇನ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ.
ಸೊರೇನ್ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ಬಂಧನಕ್ಕೂ ಮುಂಚೆ ಅವರ ಹೇಳಿಕೆ ಪಡೆಯುವುದು ಬಹುಮುಖ್ಯವಾಗಿರುತ್ತದೆ. ಆದರೆ ತನಿಖಾ ಸಂಸ್ಥೆಗೆ ಹೇಮಂತ್ ಸೊರೇನ್ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸೊರೇನ್ ಅವರ ದೆಹಲಿ ಮತ್ತು ಜಾರ್ಖಂಡ್ ನ ನಿವಾಸಗಳಲ್ಲಿ ತಡರಾತ್ರಿಯವರೆಗೂ ಕಾದು ವಾಪಾಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.