ಬಿಹಾರ : ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ 6 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ನಾಲ್ವರು ತೀವ್ರಗಾಯಗೊಂಡಿರುವ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ ಸಿಕಂದರಾ-ಶೇಖ್‌ಪುರ ರಾಷ್ಟ್ರೀಯ ಹೆದ್ದಾರಿ-333ರಲ್ಲಿ,ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರು,ಗಾಯಾಳುಗಳು ಪಾಟ್ನಾದಿಂದ ಜಮುಯಿಗೆ ಹಿಂತಿರುಗುತ್ತಿದ್ದರು.
ಸುಶಾಂತ್ ಸಿಂಗ್ ರಜಪೂತ್ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿಗೆ ಇದ್ದಕ್ಕಿದ್ದಂತೆ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.ಚಾಲಕ ಸೇರಿದಂತೆ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ,ನಾಲ್ವರು ಗಾಯ ಗೊಂಡಿದ್ದು ಅವರು ತಕ್ಷಣವೇ ಜಮುಯಿ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು.

ಲಾಲ್ ಜೀತ್ ಸಿಂಗ್ ಅವರು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರ ಸೋದರ ಮಾವ.ಒ.ಪಿ.ಸಿಂಗ್ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ.ಒ.ಪಿ ಸಿಂಗ್ ಅವರ ಸಹೋದರಿ ಗೀತಾ ದೇವಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಜಮುಯಿಗೆ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಲಾಲ್ ಜೀತ್ ಸಿಂಗ್,ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್ ಅಲಿಯಾಸ್ ನೆಮಾನಿ ಸಿಂಗ್ ಮತ್ತು ರಾಮ್ ಚಂದ್ರ ಸಿಂಗ್,ಮಗಳು ಬೇಬಿ ದೇವಿ,ಸೊಸೆ ಅನಿತಾ ದೇವಿ ಮತ್ತು ಚಾಲಕ ಪ್ರೀತಮ್ ಕುಮಾರ್ ಎಂದು ಗುರುತಿಸಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಭಾವ ಒ.ಪಿ.ಸಿಂಗ್ ಅವರ ಸಹೋದರಿ ನಿಧನರಾಗಿದ್ದರು. ಅವರ ಅಂತಿಮ ಸಂಸ್ಕಾರವನ್ನು ಮುಗಿಸಿ ಕುಟುಂಬದವರೆಲ್ಲ ಪಾಟ್ನಾದಿಂದ ಹಿಂದಿರುಗು ತ್ತಿದ್ದರು.ಈ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿರುವುದು ದುರ್ದೈವ.ಟ್ರಕ್ ಮತ್ತು ಕಾರಿನ ನಡುವೆ ಭೀಕರವಾಗಿ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲಿ 6 ಮಂದಿ ಮೃತಪಟ್ಟಿದ್ದು,4 ಗಾಯಾಳುಗಳ ಸ್ಥಿತಿ ಚಿಂತಾಜನಕ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರ 6 ಜನರ ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಅವರನ್ನು ಪಾಟ್ನಾಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
2020 ರ ಜೂ.14ರಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಪತ್ತೆ ಆಗಿತ್ತು.ಸುಶಾಂತ್ ನಿಧನದ ಬಗ್ಗೆ ಸಂಶಯಗಳಿದ್ದು,ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.ಸುಶಾಂತ್ ಸಿಂಗ್ ನಿಧನದ ನೋವು ಹಸಿರಾಗಿರುವಾಗಲೇ ಅವರ ಕುಟುಂಬದ 6 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿರುವುದು ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.




