ಬೆಂಗಳೂರು : ಬೆಂಗಳೂರು ನಗರದ ಶೇಷಾದ್ರಿಪುರಂನಲ್ಲಿ ಮಾಜಿ ಪ್ರಧಾನಿ ದಿವಂಗತರಾಜೀವ್ ಗಾಂಧಿಯವರ 15 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ.
ಈ ಸಂಬಂಧ ಶೇಷಾದ್ರಿಪುರಂ ವೃತ್ತದಲ್ಲಿ ಎಲ್ಲಾ ರೀತಿಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ರಾಜ್ಯದಲ್ಲೇ ಈ ಪ್ರತಿಮೆ ಅತೀ ಎತ್ತರದ ರಾಜೀವ್ ಗಾಂಧಿ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬಿಬಿಎಂಪಿ ಬೆಂಗಳೂರು ನಗರದ ಸುಮಾರು 25 ವೃತ್ತಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದರಲ್ಲಿ ಶೇಷಾದ್ರಿಪುರಂ ವೃತ್ತ, ಪ್ಲಾಟ್ ಫಾರ್ಮ್ ವೃತ್ತ ಮತ್ತು ಸಂಪಿಗೆ ರಸ್ತೆ ಸೇರುವ ಜಂಕ್ಷನ್ ಕೂಡ ಒಂದಾಗಿದ್ದು, ಇದನ್ನು ರಾಜೀವ್ ಗಾಂಧಿ ಸ್ಕ್ವೇರ್ ಎಂದು ಕರೆಯಲಾಗುತ್ತಿದೆ.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಮ್ಮ ಅನುದಾನದಲ್ಲಿ 1.25 ಕೋಟಿ ರೂಪಾಯಿ ನೀಡಿದ್ದು, ಇದರಿಂದ ರಾಜೀವ್ ಗಾಂಧಿ ವೃತ್ತ ಹೈಟೆಕ್ ಸ್ಪರ್ಶ ಕಾಣುತ್ತಿದೆ. ರಾಜೀವ್ ಗಾಂಧಿ ಅವರ ಕಂಚಿನ ಪ್ರತಿಮೆಯು 15 ಅಡಿ ಎತ್ತರವಿರಲಿದ್ದು, ಇದಕ್ಕೆ ಸ5 ಅಡಿ ಎತ್ತರದ ಪೀಠವನ್ನು ಸಿದ್ದಪಡಿಸಲಾಗಿದೆ. ಪ್ರತಿಮೆಯು 2500 ಕೆಜಿ ತೂಕ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ ಪ್ರದಕ್ಷಿಣಿ ಸಂದರ್ಭದಲ್ಲಿ ಕಳೆಗುಂದಿದ ರಾಜೀವ್ ಗಾಂಧಿ ಪ್ರತಿಮೆಯನನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗಮನಿಸಿದ್ದರು. ಕೂಡಲೇ ಇದನ್ನು ತೆರವುಗೊಳಿಸಿ, ಹೊಸ ಪ್ರತಿಮೆ ಸ್ಥಾಪಿಸಲು ಸೂಚನೆ ನೀಡಿದ್ದರು. ಹೈದರಾಬಾದ್ ನಲ್ಲಿ ಪ್ರತಿಮೆ ಸಿದ್ದಗೊಂಡಿದ್ದು, ಇನ್ನು ಒಂದೆರೆಡು ವಾರದಲ್ಲಿ ಇದರ ಉದ್ಘಾಟನೆಯಾಗಲಿದೆ.




