ಬೆಂಗಳೂರು : ಬಿಟ್ ಕಾಯಿನ್ ಪ್ರಕರಣ ನಮ್ಮ ಅವಧಿಯಲ್ಲಿ ಆಗಿಲ್ಲ, ಈ ಹಿಂದಿನ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಾಗ ಈ ಪ್ರಕರಣ ಬಯಲಾಗಿತ್ತು. ಆದರೆ ಅವರು ಅಂದು ಸುಮ್ಮನಿದ್ದು ಇಂದು ನಮ್ಮ ಸರ್ಕಾರದ ಅವಧಿಯಲ್ಲಿ ಸುಮ್ಮನೆ ಕಿರುಚಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದುಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರು, ಹಾಗೂ ಅವರ ಮಕ್ಕಳು ಶಾಮೀಲಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನವರು ಹಿಟ್ ಆ್ಯಂಡ್ ರನ್ ಕೇಸ್ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರು ತಾಕತ್ತಿದ್ದರೆ ಬಿಟ್ ಕಾಯಿನ್ ಪ್ರಕರಣ ಸಂಬಂಧ ಸಮಗ್ರ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ತಾಕೀತು ಮಾಡಿದ ಅವರು, ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆಗೆ ಬರ್ತೀರಾ ಬನ್ನಿ ಎಂದು ರೇಣುಕಾರ್ಯ ಸವಾಲು ಹಾಕಿದರು.
ಇಡೀ ದೇಶವನ್ನೇ ಲೂಟಿ ಹೊಡೆದವರು ಕಾಂಗ್ರೆಸ್ ನವರು, ಶಾಸಕ ಪ್ರಿಯಾಂಕ ಖರ್ಗೆ ಹೇಗಿದ್ದವರು ಈಗ ಹೇಗಿದ್ದಾರೆ ಗೊತ್ತಿದೆ, ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶರಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತ ಅಧ್ಯಕ್ಷರ ಪದಗ್ರಹಣದಲ್ಲಿ ಜಮೀರ್ ಅಹಮದ್ ಖಾನ್ ನಾಪತ್ತೆ
ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಜಮೀರ್ ಅವರನ್ನ ಆಹ್ವಾನ ಮಾಡಿರಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಆಗಿದೆ. ಕಾಂಗ್ರೆಸ್ ನವರು ಈವರೆಗೂ ಹೇಳ್ತಿದ್ರು, ನಾವು ಅಲ್ಪ ಸಂಖ್ಯಾತರ ಉದ್ದಾರಕರು ಅಂತ.ಅವರನ್ನ ಯೂಸ್ ಆಂಡ್ ಥ್ರೋ ತರ ಬಳಸಿ ಬಿಸಾಕುತ್ತಿದ್ದಾರೆ, ಇದನ್ನ ಅಲ್ಪ ಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು ಅಂತ ಆರೋಪಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ನವರು ಮೂಲೆಗುಂಪು ಮಾಡುತ್ತಿದ್ದಾರೆ, ಕಾಂಗ್ರೆಸ್ ನಲ್ಲಿ ಅಗ್ರಗಣ್ಯ ನಾಯಕಿ ಸೋನಿಯಾ ಚುನಾವಣೆಯಲ್ಲಿ ಸೋತರೂ ಅಗ್ರಮಾನ್ಯ ನಾಯಕಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಇಮ್ರಾನ್ ಪಾಷ, ನಾವು ಟಿಪ್ಪು ವಂಶಸ್ಥರು, ನಾವು ಯಾರ ತಲೆ ಬೇಕಾದ್ರೂ ತೆಗೀತೀವಿ ಅಂತ ಹೇಳಿದ್ದಾರೆ. ಈ ಹೇಳಿಕೆ ಸರಿಯಲ್ಲ, ನೀವು ಈ ರೀತಿ ಹೇಳಿದ್ರೆ ನಾವು ಸುಮ್ಮನೆ ಕೂರಲ್ಲ. ಕರ್ನಾಟಕಕ್ಕೆ ಬಂದು ಈ ರೀತಿ ಹೇಳಿಕೆ ನೀಡಿದ್ರೆ, ನಾವು ಏನು ಮಾಡಬೇಕೋ ಅದನ್ನ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.
ಅವರು ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ಅವರು, ಮತಾಂಧ ಟಿಪ್ಪು ಬಗ್ಗೆ ಜಾರೋಷವಾಗಿ ಹೇಳ್ತೀರಿ ಅಂದ್ರೆ, ಇದನ್ನು ನಾವು ಸಹಿಸೋದಿಲ್ಲ ಎಂದು ಹೇಳಿದರು.




