ರಾಮನಾಗಿ ಮಹೇಶ್​ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್​’ ಪ್ಲ್ಯಾನ್

ಒಂದು ಸಿನಿಮಾ ಸೂಪರ್​ ಹಿಟ್​ ಆದರೆ ಅದಕ್ಕೆ ಸೀಕ್ವೆಲ್​ ಮಾಡಲು ನಿರ್ಮಾಪಕರು ಧೈರ್ಯ ತೋರಿಸುತ್ತಾರೆ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಾರೆ. ಸ್ಟಾರ್​ ಕಲಾವಿದರನ್ನು ಸೀಕ್ವೆಲ್​ನ ಪಾತ್ರವರ್ಗಕ್ಕೆ ಸೇರಿಸಿಕೊಳ್ಳುವ ಆಲೋಚನೆ ಬರುತ್ತದೆ. ಸದ್ಯಕ್ಕೆ ತೇಜ ಸಜ್ಜಾ ನಟನೆಯ ಹನುಮಾನ್ ಚಿತ್ರತಂಡ ಕೂಡ ಅದೇ ರೀತಿ ಪ್ಲ್ಯಾನ್ ಮಾಡುತ್ತಿದೆ. ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಹಾಗಾಗಿ ಅದಕ್ಕೆ ‘ಜೈ ಹನುಮಾನ್​’  ಶೀರ್ಷಿಕೆಯಲ್ಲಿ ಸೀಕ್ವೆಲ್​ ಸಿದ್ಧಪಡಿಸಲಾಗುತ್ತಿದೆ. ಈ ಸೀಕ್ವೆಲ್​ನಲ್ಲಿ ಮಹೇಶ್​ ಬಾಬು ಮತ್ತು ‘ಮೆಗಾ ಸ್ಟಾರ್​’ ಚಿರಂಜೀವಿ ಅವರು ನಟಿಸಬೇಕು ಎಂದು ನಿರ್ದೇಶಕ ಪ್ರಶಾಂತ್​ ವರ್ಮಾ ಆಸೆಪಟ್ಟಿದ್ದಾರೆ.

‘ಹನುಮಾನ್​’ ಸಿನಿಮಾದಲ್ಲಿ ಇರುವುದು ಒಂದು ಸೂಪರ್​ ಹೀರೋ ಕಥೆ. ಆಂಜನೇಯನ ಕೃಪೆಯಿಂದ ಸೂಪರ್​ ಪವರ್​ ಪಡೆಯುವ ಹಳ್ಳಿ ಹುಡುಗನ ಕಹಾನಿ ಈ ಸಿನಿಮಾದಲ್ಲಿ ಇದೆ. ಅದೇ ಕಥೆ ‘ಜೈ ಹನುಮಾನ್​’ ಸಿನಿಮಾದಲ್ಲಿ ಮುಂದುವರಿಯಲಿದೆ. ಅದರಲ್ಲಿ ಶ್ರೀರಾಮ ಮತ್ತು ಆಂಜನೇಯನ ಪಾತ್ರಗಳು ಬರಲಿವೆ. ಆ ಪಾತ್ರಗಳನ್ನು ಯಾರು ಮಾಡಬೇಕು ಎಂಬುದರ ಬಗ್ಗೆ ಪ್ರಶಾಂತ್​ ವರ್ಮಾ ಅವರು ಮಾತನಾಡಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್​ ವರ್ಮಾ ಅವರು ಈ ಮಾತುಗಳನ್ನು ಹೇಳಿದ್ದಾರೆ. ‘ಮಹೇಶ್​ ಬಾಬು ಅವರು ಶ್ರೀರಾಮನ ಪಾತ್ರ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಅದು ನನ್ನ ಮನಸ್ಸಿನಲ್ಲಿದೆ. ನಮ್ಮ ಆಫೀಸ್​ನಲ್ಲಿ ಅವರ ಲುಕ್​ ಬಗ್ಗೆ ಕೆಲವು ಎಡಿಟ್​ಗಳನ್ನು ಮಾಡಿದ್ದೇವೆ. ಮುಂದೇನು ಆಗುತ್ತದೆಯೋ ನೋಡೋಣ’ ಎಂದು ಪ್ರಶಾಂತ್​ ವರ್ಮಾ ಹೇಳಿದ್ದಾರೆ. ‘ಹನುಮಾನ್​’ ಸಿನಿಮಾದಲ್ಲಿ ಸೂಪರ್​ ಹೀರೋ ಪಾತ್ರ ಮಾಡಿದ ತೇಜ ಸಜ್ಜಾ ಅವರು ‘ಜೈ ಹನುಮಾನ್​’ ಚಿತ್ರದ ಪ್ರಮುಖ ಪಾತ್ರದಲ್ಲಿ ಮುಂದುವರಿಯಲಿದ್ದಾರೆ.

ಹನುಮಂತನ ಪಾತ್ರವನ್ನು ಚಿರಂಜೀವಿ ಅವರು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ ಪ್ರಶಾಂತ್​ ವರ್ಮಾ. ಇತ್ತೀಚೆಗೆ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಮಾಡಲಾಯಿತು. ಆ ಬಳಿಕ ಅವರು ತುಂಬ ಬ್ಯುಸಿ ಆಗಿದ್ದಾರೆ. ಸಾಧ್ಯವಾದಾಗ ಅವರನ್ನು ಭೇಟಿ ಮಾಡುವುದಾಗಿ ಪ್ರಶಾಂತ್ ವರ್ಮಾ ಹೇಳಿದ್ದಾರೆ. ಒಂದು ವೇಳೆ ಮಹೇಶ್​ ಬಾಬು ಮತ್ತು ಚಿರಂಜೀವಿ ಅವರು ಈ ಪಾತ್ರಗಳನ್ನು ಒಪ್ಪಿಕೊಂಡರೆ ‘ಜೈ ಹನುಮಾನ್​’ ಸಿನಿಮಾದ ಸ್ಟಾರ್​ ಮೆರುಗು ಹೆಚ್ಚಾಗಲಿದೆ.

More News