ಬೆಂಗಳೂರು : ಮುಂದಿನ ಚುನಾವಣೆಗಾಗಿ ಕುಮಾರಸ್ವಾಮಿ ಹಾಗೂ ಅಶೋಕ್ ತಮ್ಮ ತೀಟೆ ತೀರಿಸಿಕೊಳ್ಳುತ್ತಿದ್ದಾರೆ, ಇವೆಲ್ಲ ಮಾಡಬೇಡಿ ಅಂತ ಜನರೇ ಹೇಳುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಪೋರ್ಟ್ ಮಾಡಲ್ಲ ಅಂತ ಮಂಡ್ಯ ಜಿಲ್ಲೆಯ ಜನರೇ ಹೇಳುತ್ತಿದ್ದಾರೆ, ಮಂಡ್ಯದಲ್ಲಿ ಬೆಂಕಿ ಹಚ್ಚೋಕೆ ಸಾಧ್ಯವಿಲ್ಲ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಇತಿಹಾಸವನ್ನೂ ನೋಡಿ, ಮಂಡ್ಯ ಜಿಲ್ಲೆಯ ಜನರು ದೇವೇಗೌಡರಿಗೆ ಸಹಕಾರ ಮಾಡಿದ್ದಾರೆ, ನಮ್ಮ ಇತಿಹಾಸವನ್ನೂ ನೀವು ನೋಡಿ ಎಂದು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಪಂಚಾಯ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ದಾಖಲೆ ಕಚೇರಿಯಲ್ಲಿರುತ್ತೆ ಯಾರ ಮನೆಗೆ ಯಾಕೆ ಹೋಗುತ್ತೆ ಎಂದು ಸಚಿವ ಚೆಲುವರಾಯಸ್ವಾಮಿ ಪ್ರಶ್ನಿಸಿದರು.
ನಾವು ಹಿಂದೂ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಷ್ಟ್ರಧ್ವಜ, ಕನ್ನಡ ಧ್ವಜ ಅಷ್ಟೇ ಇರೋದು, ಎರಡು ಧ್ವಜ ಹಾರಿಸ್ತೇವೆ ಅಂತ ಒಪ್ಪಿಗೆ ಪಡೆದಿದ್ದರು. ಆದರೆ ಅವರು ಮಾಡಿದ್ದು ಏನು, 26 ರಂದು ರಾಷ್ಟ್ರಧ್ವಜವನ್ನು ಅವರೇ ಹಾರಿಸಿದ್ದಾರೆ, ಅಂದು ಸಂಜೆ ಅವರೇ ಕೆಳಗಿಳಿಸಿದ್ದಾರೆ, ನಂತರ ಬೇರೆ ಧ್ವಜ ಹಾರಿಸೋ ಪ್ರಯತ್ನ ನಡೆಸಿದ್ದಾರೆ, ಆದ್ದರಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿ ಮಂಡ್ಯ ಜಿಲ್ಲೆಯ ನೆಮ್ಮದಿ ಹಾಳುಮಾಡಬೇಡಿ ಎಂದರು.
ನಮ್ಮನ್ನು ಪ್ರವೋಕ್ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಜನರು ಹೇಳುತ್ತಿದ್ದಾರೆ. ಮಂಡ್ಯದ ಜನ ಯಾರನ್ನೂ ಬೆಂಬಲಿಸಿಲ್ಲ ಎಂದು ತಿಳಿಸಿದರು.
ಚುನಾವಣಾ ಬಜೆಟ್
ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡುತ್ತಿರುವುದು ಚುನಾವಣಾ ಬಜೆಟ್ ಎಂದು ಟೀಕಿಸಿದ ಅವರು, ನಮ್ಮ ಗ್ಯಾರೆಂಟಿಗಳನ್ನೆಲ್ಲಾ ಅವರು ಫಾಲೋ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಗಷ್ಟ್ 27 ರಂದು ಮನವಿ ಪತ್ರ ನೀಡಲಾಗಿದೆಯಾದರೂ ಇಲ್ಲಿಯವರೆಗೆ ಎನ್ ಡಿಆರ್ ಎಫ್ ಸೇರಿದಂತೆ ಯಾವುದೇ ನೆರವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ, ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದಾಯ್ತು, ರೈತರ ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ, ಇಂತಹ ಕೆಟ್ಟ ಸರ್ಕಾರ ಎಲ್ಲೂ ನೋಡಿಲ್ಲ ಎಂದರು.