ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ ಎಂದು ತಿಳಿಸಿದ ಅವರು ಸಂಶೋಧನೆ ಮತ್ತು ಆವಿಷ್ಕಾರಕ್ಕೆ 1 ಲಕ್ಷ ಕೋಟಿ ರೂಪಾಯಿ ನಿಧಿಯನ್ನು ಘೋಷಿಸಲಾಗಿದೆ. ಇದು ನಿರಂತರತೆಯ ವಿಶ್ವಾಸವನ್ನು ಹೊಂದಿದೆ ಎಂದರು.
ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರು ಎಂಬ ದೇಶದ ಎಲ್ಲಾ ನಾಲ್ಕು ಸ್ತಂಭಗಳನ್ನು ಸಶಕ್ತಗೊಳಿಸುತ್ತದೆ ಎಂದು ಹೇಳಿದರು. 2047ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ಹೊಂದಿದೆ ಎಂದರು.

ದೇಶದ ಆಧುನಿಕ ಮೂಲಸೌಕರ್ಯ ನಿರ್ಮಾಣದೊಂದಿಗೆ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ ಎಂದು ನರೇಂದ್ರ ಮೋದಿ ತಿಳಿಸಿದರು. ಇದು ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣ ಮತ್ತು ಅವರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಗೆ ಒತ್ತು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಬಡವರಿಗೆ 2 ಕೋಟಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘಖೋಷಿಸಲಾಗಿದೆ. ಆಶಾ ಅಂಗನವಾಡಿ ಕಾರ್ಯಕರ್ತೆಯರು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.




