Union Interim Budget 2024: ರಾಜ್ಯಕ್ಕೆ ಗಧಾ ಪ್ರಹಾರ ಮಾಡುವ ನೀತಿ ಅತ್ಯಂತ ಖಂಡನೀಯ: ಸಚಿವ ಹೆಚ್.ಕೆ‌.ಪಾಟೀಲ್ ಕಿಡಿ

ಬೆಂಗಳೂರು: ರಾಜ್ಯಕ್ಕೆ ಗಧಾ ಪ್ರಹಾರ ಮಾಡುವ ನೀತಿ ಅತ್ಯಂತ ಖಂಡನೀಯ ಎಂದು ಕಾನೂನು ಸಚಿವ ಹೆಚ್.ಕೆ‌.ಪಾಟೀಲ್ ಕಿಡಿ ಕಾರಿದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಕಡೆಗಣನೆ ಸಂಬಂಧ ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಯಾವುದೇ ರಾಜ್ಯಕ್ಕೆ ಆರ್ಥಿಕವಾಗಿ ಗಧಾ ಪ್ರಹಾರ ಮಾಡುವ ನೀತಿ ಅತ್ಯಂತ ಖಂಡನೀಯ. ಯಾವ ಕಾರಣಕ್ಕೆ ಕರ್ನಾಟಕಕ್ಕೆ ಇಷ್ಟು ಕಡಿಮೆ ಪ್ರಮಾಣ ಕೊಡುತ್ತೀರ ಎಂದು ವಾಗ್ದಾಳಿ ನಡೆಸಿದರು.

223 ತಾಲೂಕುಗಳಲ್ಲಿ ಬರ ಇದ್ದರೂ ರಾಜ್ಯಕ್ಕೆ ಈವರೆಗೆ ನಯಾ ಪೈಸೆ ನೀಡಿಲ್ಲ. ಇದು ಯಾವ ಧೋರಣೆ. ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಬೇಕು. ಇದನ್ನು ಎಲ್ಲಾ ದಕ್ಷಿಣ ರಾಜ್ಯಗಳು ಖಂಡಿಸುತ್ತಾವೆ ಎಂದು ತಿಳಿಸಿದರು‌.

ಎಲ್ಲಿ ಶ್ರಮ ಇದೆ ಮತ್ತು ಆದಾಯವಿದೆ ಹಾಗೂ ಹೆಚ್ಚು ದುಡಿಯುವ ರಾಜ್ಯಗಳಿಗೆ ನ್ಯಾಯಯುತ ಪಾಲು ಬರಬೇಕು. ರಾಜಕೀಯ ಮಾಡುವುದಾದರೆ ಹೇಗೆ ವಿಶ್ವಾಸಾರ್ಹತೆ ಕುದುರಿಸಲು ಸಾಧ್ಯ ಎಂದು ಎಂದು ಬೇಸರ ವ್ಯಕ್ತಪಡಿಸಿದರು.

6 ಬಿಲ್ ಗಳ ಬಗ್ಗೆ ಮಾಹಿತಿ ಕೋರಿದ ರಾಜ್ಯಪಾಲರು:

ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ‌.ಪಾಟೀಲ್, ರಾಜ್ಯಪಾಲರ ಬಳಿ ಆರು ಬಿಲ್ ಗಳಿದ್ದು, ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದಾರೆ. ಅವರು ಕೇಳಿದ ಮಾಹಿತಿಗಳನ್ನು ನೀಡಿದ್ದೇವೆ. ಒಟ್ಟು 6 ಮಸೂದೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, ಬಾಂಬೆ ಪಬ್ಲಿಕ್ ಟ್ರಸ್ಟ್ ವಿಧೇಯಕ ಸೇರಿದಂತೆ ಒಟ್ಟು ಆರು ಬಿಲ್ ಗಳ ಮಾಹಿತಿ ಕೇಳಿದ್ದಾರೆ. ಬೆಳಗಾವಿ ಅಧಿವೇಶನದ ಬಳಿಕ ಒಟ್ಟು 19 ಬಿಲ್ ಗಳನ್ನು ರಾಜ್ಯಪಾಲರ ಅನುಮತಿಗಾಗಿ ಕಳಿಸಿದ್ದೆವು. ಈ ಪೈಕಿ ಆರು ಬಿಲ್ ಗಳ ಸಂಬಂಧ ರಾಜ್ಯಪಾಲರು ಮಾಹಿತಿ ಕೇಳಿದ್ದಾರೆ. ಮಾಹಿತಿಯನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.

More News