ಮುಂಬೈ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಶಿವಸೇನಾ ಬಣದ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಬಿಜೆಪಿ ಶಾಸಕನನ್ನು ಮಹಾರಾಷ್ಟ್ರದ ಥಾಣೆ ವ್ಯಾಪ್ತಿಯ ಹಿಲ್ ಲೈನ್ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಸನಗರ ಪ್ರದೇಶದ ಹಿಲ್ ಲೈನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರ ಕೊಠಡಿಯಲ್ಲಿ ಶಿವಸೇನಾ ನಾಯಕ ಮಹೇಶ್ ಗಾಯಕ್ವಾಡ್ ಅವರ ಮೇಲೆ ಕಲ್ಯಾಣ್ ಕ್ಷೇತ್ರದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತಾತ್ರೇಯ ಶಿಂಧೆ ತಿಳಿಸಿದ್ದಾರೆ.

ನನ್ನ ಪುತ್ರನಿಗೆ ಥಳಿಸಿದ್ದರಿಂದ ಬಂದೂಕು ಬಳಸಿದ್ದೇನೆ. ರಾಜ್ಯದಲ್ಲಿ ಗೂಂಡಾಗಳ ಸಾಮ್ರಾಜ್ಯ ಸ್ಥಾಪಿಸಲು ಮುಖ್ಯಮಂತ್ರಿ ಏಕನಾಥ ಶಿಂಧೆ ಯತ್ನಿಸುತ್ತಾರೆ ಅದಕ್ಕಾಗಿ ನಾನೇ ಗುಂಡು ಹಾರಿಸಿದ್ದೇನೆ. ಅದರಲ್ಲಿ ಯಾವುದೇ ವಿಷಾದವಿಲ್ಲ. ಪೊಲೀಸ್ ಠಾಣೆಯಲ್ಲಿ ಪೊಲೀಸರ ಮುಂದೆ ನನ್ನ ಮಗನನ್ನು ಥಳಿಸಿದರೆ ನಾನೇನು ಮಾಡಬೇಕು ಹೇಳಿ ಎಂದು ಬಂಧನಕ್ಕೂ ಮುುನ್ನಾ ಬಿಜೆಪಿ ಶಾಸಕ ಹೇಳಿದ್ದಾನೆ.
ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಥಾಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಪ್ರಕರಣದಲ್ಲಿ ಬಿಜೆಪಿ ಶಾಸಕ ಮತ್ತು ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.




