ಬೆಂಗಳೂರು: ಮುಂದಿನ ಚುನಾವಣೆ ಒಳಗೆ ಜೆಡಿಎಸ್ ಪಕ್ಷವನ್ನು ಮುಗಿಸಲೇಬೇಕೆಂದು ದುಷ್ಟಯತ್ನ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಪಕ್ಷದ ಮುಖಂಡರು, ಶಾಸಕರನ್ನು ಹೈಜಾಕ್ ಮಾಡಲು ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
9 ದಿನಗಳ ಜನತಾ ಸಂಗಮ ಕಾರ್ಯಗಾರ ಇಂದು ಮುಕ್ತಾಯದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಕ್ಷವನ್ನು ದುರ್ಬಲಗೊಳಿಸಲು ಅವರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರಗಳಲ್ಲಿ ಕೊಂಚ ಬಲ ಇಟ್ಟುಕೊಂಡಿರುವ ಶಾಸಕರನ್ನು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಅಂಥವರ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೊಬ್ಬರ ಹೆಸರು ಹೇಳದೆ ಟೀಕಾ ಪ್ರಹಾರ ನಡೆಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಆಗಿದ್ದವರೊಬ್ಬರು ನಮ್ಮ ಶಾಸಕರು, ಮುಖಂಡರಿಗೆ ದೂರವಾಣಿ ಕರೆ ಮಾಡಿ ಸತತವಾಗಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಸಿಎಂ ಆಗಿದ್ದವರು, ಪುನಾ ಸಿಎಂ ಆಗಲು ಕನಸು ಕಾಣುತ್ತಿರುವವರು ಈ ಕೆಲಸ ಮಾಡುತ್ತಿದ್ದಾರೆ. ಪದೇಪದೆ ಕರೆ ಮಾಡಿ, ಅವರ ತಲೆ ಕೆಡಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಒಬ್ಬರಿಗೆ ಹನ್ನೊಂದು ಸಲ ಕರೆ ಮಾಡಿ ಏನು ತೀರ್ಮಾನ ಮಾಡಿದ್ರಿ ಅಂತಾ ಕೇಳುತ್ತಿದ್ದಾರೆ. ಇದನ್ನು ಸ್ವತಃ ನನ್ನ ಆತ್ಮೀಯ ಶಾಸಕರೊಬ್ಬರು ನನಗೆ ಆ ಮಾಜಿ ಮುಖ್ಯಮಂತ್ರಿ ಮಾಡಿರುವ ದೂರವಾಣಿ ಕರೆಯ ಲಿಸ್ಟ್ ಅನ್ನು ತೋರಿಸಿದ್ದಾರೆ ಎಂಬ ಸ್ಫೋಟಕ ಅಂಶವನ್ನು ಕುಮಾರಸ್ವಾಮಿ ಅವರು ಬಹಿರಂಗಪಡಿಸಿದರು.
ಪಕ್ಷ ಮತ್ತು ನಮ್ಮ ಬಗ್ಗೆ ಲಘು ಮಾತು ಬೇಡ
ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವರು ಅಲ್ಲಿಗೆ ಹೋಗಲಿ. ಆದರೆ, ಹೋಗುವ ಮುನ್ನ ಅಥವಾ ಹೋದ ಮೇಲೆ ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಬೇಡ. ಇಲ್ಲಿಂದ ಎಲ್ಲ ಶಕ್ತಿ ಪಡೆದುಕೊಂಡು ನಮ್ಮ ಬಗ್ಗೆ ಮಾತನಾಡವುದು ಬೇಡ. ಯಾರು ಪಕ್ಷ ಬಿಡಲು ಒಂದು ಹೆಜ್ಜೆ ಇಟ್ಟಿದ್ದಾರೆಯೋ ಅಥವಾ ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆಯೋ? ಅವರಿಗೆ ಎಲ್ಲಿ ಭವಿಷ್ಯ ಇದೆ ಎಂದು ಅನ್ನಿಸುವುದೋ ಅಲ್ಲಿಗೆ ಹೋಗಲಿ. ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ನಾವು ಅಳುತ್ತ ಕೂರಲು ಆಗಲ್ಲ. ಆದರೂ ಕೆಲವರನ್ನು ಮನವೊಲಿಸಲು ಸಾಧ್ಯವಿದ್ದರೆ ಮಾಡುತ್ತೇವೆ. ಆ ಪ್ರಯತ್ನವನ್ನು ನಾವು ಬಿಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ವಿವರಿಸಿದರು.
2ನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮಕ್ಕೆ ತೆರೆ
ಕಳೆದ 9 ದಿನಗಳಿಂದ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ 1.O ದ ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ಕ್ಕೆ ಇಂದು ತೆರೆ ಬಿದ್ದಿದ್ದು, ಮುಂದಿನ ಹಂತದ ಕಾರ್ಯಕ್ರಮವನ್ನು ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಎಲ್ಲಾ ಜಿಲ್ಲೆಗಳ ಮುಖಂಡರ ಜತೆ ಸಭೆ ನಡೆಸಿದ್ದೇವೆ. ಬಿಡದಿ ಕಾರ್ಯಾಗಾರದ ನಂತರ ಪಕ್ಷದ ಕಚೇರಿಯಲ್ಲಿ ಜನತಾ ಸಂಗಮ ನಡೆದಿದೆ. ಮುಖಂಡರು, ಪದಾಧಿಕಾರಿಗಳು ಹಾಗೂ ಮುಂಬರುವ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದ್ದೇವೆ. ದೇವೇಗೌಡರ ಸಮ್ಮುಖದಲ್ಲಿ ಅವರಿಗೆಲ್ಲ ಗುರಿ ದಾರಿ ತೋರಿದ್ದೇವೆ ಎಂದು ಅವರು ಹೇಳಿದರು.
ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ
ಕೆಲ ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ.

ಅಲ್ಲಿನ ಹಲವು ಕೊರತೆಗಳ ಕಾರಣ ಸಂಘಟನೆಗೆ ಸ್ವಲ್ಪ ಸಮಯಾವಾಕಾಶ ಬೇಕಿದೆ. ಜತೆಗೆ, ಬೆಂಗಳೂರು ನಗರದ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಮುಂದಿನ ಬಿಬಿಎಂಪಿ ಚುನಾವಣೆ ಹಾಗೂ 2023ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈಗಾಗಲೇ ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. 2023ಕ್ಕೆ ನಮ್ಮ ಪಕ್ಷದ ಸ್ವತಂತ್ರ ಸರಕಾರ ಬಂದರೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಕಾಲ ಮಿತಿಯಲ್ಲಿ ಅನುಷ್ಟಾನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.




