ಬೆಂಗಳೂರು: ಮಹಿಳೆಯರನ್ನು ಉದ್ಯಮದತ್ತ ಇನ್ನಷ್ಟು ಆಕರ್ಷಿಸಲು ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿ ಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಉದ್ಯಮ ಪಾರ್ಕ್‍ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.
ಬೆಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮ ಶೀಲತಾ ಪ್ರಯುಕ್ತ ಉಬುಂಟು ಸಂಸ್ಥೆ ಹಮ್ಮಿಕೊಂಡಿದ್ದ ‘ಟುಗೆದರ್ ವಿ ಗ್ರೋ ‘ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಬಂಟು, (UNUNTU-consortium of women entrepreneur’s associations) ಇದೊಂದು ಮಹಿಳಾ ವಾಣಿಜ್ಯೋದಮ ಒಕ್ಕೂಟಗಳ ಸಂಘಟನೆಯಾಗಿದೆ. ಇದರಡಿ ಸುಮಾರು 30 ಮಹಿಳಾ ಉದ್ಯಮಿಗಳ ಸಂಘಟನೆಗಳು ಹಾಗೂ 1500 ಸದಸ್ಯರು ಒಂದೇ ವೇದಿಕೆಯಡಿ ಕೆಲಸ ಮಾಡುತ್ತಾರೆ ಎಂದರು.
ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್ ಸ್ಥಾಪಿಸುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದರ ಸದುಪಯೋಗವನ್ನು ಪಡೆದುಕೊಂಡರೆ ಇದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರಲ್ಲದೆ, ಮಹಿಳೆಯರು ಸ್ವಯಂ ಉದ್ಯಮಿಗಳಾಗಿ ಇನ್ನೊಬ್ಬರಿಗೆ, ಉದ್ಯೋಗ ನೀಡುವ ಹಂತಕ್ಕೆ ಬೆಳೆಯುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಬೇಕು ಎಂದು ಇದೇ ವೇಳೆ ಮಹಿಳಾ ಉದ್ಯಮಿಗಳಿಗೆ ಕರೆ ನೀಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ನೀವು ಉದ್ಯೋಗ ಪಡೆದರಷ್ಟೇ ಸಾಲದು ಉದ್ಯಮಿಯಾಗುವುದರ ಜೊತೆಗೆ ನೂರಾರು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆದಾಗ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇನ್ಫೋಸಿಸ್ ನ ಸುಧಾ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ, ಸೇರಿದಂತೆ ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಅವರ ಜೀವನದ ಯಶೋಗಾಧೆ ಇಂದಿನ ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬೇಕು ಎಂದು ಆಶಿಸಿದರು.
ಮಹಿಳೆಯರನ್ನು ಉದ್ಯಮದತ್ತ ಆಕರ್ಷಿಸಲು ನಮ್ಮ ಸರ್ಕಾರ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಉದ್ಯಮಶೀಲತೆಯ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉದ್ಯೋಗದಾತರಾಗಿ ಎಂದು ಸಲಹೆ ಮಾಡಿದರು.
ಸ್ವಂತ ಉದ್ಯಮ ಸ್ಥಾಪಿಸಿ, ಉದ್ಯೋಗದಾತರಾಗುವುದರ ಜೊತಗೆ ಇತರರೂ ನಿಮ್ಮಂತೆ ಉದ್ಯಮಿಗಳಾಗಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ. ಈ ನಿಟ್ಟಿನಲ್ಲಿನಮ್ಮಇಲಾಖೆ ‘ ಉದ್ಯಮಿಯಾಗು,ಉದ್ಯೋಗ ನೀಡು’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಬೇರೆಬೇರೆ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿರುವ “ಉಬುಂಟು” ದಂತಹ ಸಂಸ್ಥೆಗಳು ಈಗ ಬೆಂಬಲ ನೀಡುವ ವ್ಯವಸ್ಥೆಯಾಗಿ ಮಾರ್ಪಟ್ಟಿವೆ. ನಿಮ್ಮಇಂಥ ಪ್ರಯತ್ನಗಳಲ್ಲಿ ಸರ್ಕಾರ ನಿಮ್ಮ ಜತೆ ಇರುತ್ತದೆ ಎಂದು ಅಭಯ ನೀಡಿದರು.

ದೇಶದಲ್ಲಿಂದು ಮಹಿಳೆಯರೇ ನಡೆಸುವಂಥಹ ಉದ್ಯಮಗಳ ಸಂಖ್ಯೆ13.5 ರಿಂದ 15.7 ದಶಲಕ್ಷವಿದ್ದು,ಒಟ್ಟು ಉದ್ಯಮಗಳಲ್ಲಿ ಇದರ ಪಾಲುಶೇ.20ರಷ್ಟಿದೆ ಎಂಬುದು ನಮ್ಮೆಲ್ಲರಿಗೂಹೆಮ್ಮೆಯ ವಿಷಯವಾಗಿದೆ. ಉದ್ಯಮಶೀಲತೆಯ ಗುಣಮಟ್ಟ ಮತ್ತು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು 30 ದಶಲಕ್ಷಕ್ಕೆ ಹೆಚ್ಚಿಸಬಹುದು.ಮಹಿಳೆಯರು ಮನಸ್ಸು ಮಾಡಿದರೆ ಈ ಗುರಿ ತಲುಪುವುದು ಕಷ್ಟವೇನಲ್ಲ ಎಂದು ಕಿವಿಮಾತು ಹೇಳಿದರು.
1948ರ ಫ್ಯಾಕ್ಟರಿ ತಿದ್ದುಪಡಿ ಕಾಯಿದೆಯಡಿ ಕಾರ್ಖಾನೆಗಳಲ್ಲಿ ರಾತ್ರಿ 7 ರಿಂದ ಬೆಳಿಗ್ಗೆ 6ರವರೆಗೆ ಕೆಲಸ ಮಾಡಲು ಸರ್ಕಾರ ಮಹಿಳೆಯರಿಗೆ ಅನುಮತಿ ನೀಡಿದೆ. ನೂತನ ಕೈಗಾರಿಕಾ ನೀತಿಯಡಿ ಎಸ್ಸಿ/ಎಸ್ಟಿ, ಮಹಿಳೆಯರು ಸೇರಿದಂತೆ ವಿಶೇಷ ವರ್ಗದ ಉದ್ಯಮಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ನೇತೃತ್ವದ ಉಬುಂಟುಮಹಿಳೆಯರಲ್ಲಿ ಉದ್ಯಮ ಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಿ ಅವರು ಯಶಸ್ಸನ್ನು ಸಾಧಿಸಲು ನೆರವಾಗಿದೆ. ಇಂಥ ಸಂಘಟನೆಯ ಸಾರಥ್ಯ ವಹಿಸಿರುವ ಅವರ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.




