ಆಸ್ಸಾಂ: ಸಿದ್ದಾರ್ಥ ಆನಂದ್ ನಿರ್ದೇಶನದ ಬಹುನಿರೀಕ್ಷಿತ ಫೈಟರ್ ಚಿತ್ರದಲ್ಲಿನ ಚುಂಬನ ದೃಶ್ಯಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಸಮವಸ್ತ್ರದಲ್ಲಿಯೇ ಚುಂಬನ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ತಪ್ಪು ಎಂದು ಲೀಗಲ್ ನೋಟೀಸ್ ಜಾರಿ ಮಾಡಲಾಗಿದೆ.
ಆಸ್ಸಾಂ ಏರ್ ಫೋರ್ಸ್ ಅಧಿಕಾರಿ ಸೌಮ್ಯ ದೀಪ್ ದಾಸ್ ಅವರು ನಿರ್ದೇಶಕ ಸಿದ್ದಾರ್ಥ ಆನಂದ್ ಹಾಗೂ ನಿರ್ಮಾಪಕರಿಗೆ ಮತ್ತು ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆಗೆ ಲೀಗಲ್ ನೋಟೀಸ್ ನೀಡಿದ್ದಾರೆ. ಇಬ್ಬರೂ ವಾಯುಪಡೆಯ ಸಮವಸ್ತ್ರದಲ್ಲಿ ಲಿಪ್ ಲಾಕ್ ಮಾಡಿರುವುದು ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತಂದಿದೆ ಮತ್ತು ಅಗೌರವವಾಗಿದೆ ಎಂದು ಅವರು ನೋಟೀಸ್ ನಲ್ಲಿ ತಿಳಿಸಿದ್ದಾರೆ.

ವಾಯುರಡೆಯ ಅಧಿಕಾರಿಗಳು ಇಂತಹ ಚಟುವಟಿಕೆಗಳನ್ನು ಚಲನಚಿತ್ರದಲ್ಲಿ ತೋರಿಸುವುದರಿಂದ ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಸಾವಿರಾರು ವಾಯುಪಡೆಯ ಅಧಿಕಾರಿಗಳ ತ್ಯಾಗ ಮತ್ತು ಸಮರ್ಪಣೆಯನ್ನು ಕಡಿಮೆಗೊಳಿಸುತ್ತದೆ. ವಾಯುಪಡೆಯ ಸಮವಸ್ತ್ರವು ಕೇವಲ ಬಟ್ಟೆಯಲ್ಲ, ಅದು ನಮ್ಮ ಕರ್ತವ್ಯ, ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರೀಯ ಭದ್ರತೆಯ ಕಡೆಗೆ ನಮ್ಮ ಅಚಲ ಬದ್ದತೆಯ ಪ್ರಬಲ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಕಾಯಿದೆ 1950 ರ ಸೆಕ್ಷನ್ 45-47 ಅನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಈ ದೃಶ್ಯವನ್ನು ತಕ್ಷಣದಿಂದಲೇ ತೆಗೆದುಹಾಕಬೇಕು. ಭವಿಷ್ಯದಲ್ಲಿ ವಾಯುಪಡೆಯ ಚಿತ್ರವನ್ನು ಎಂದಿಗೂ ತಪ್ಪಾಗಿ ಪ್ರತಿನಿಧಿಸುವುದಿಲ್ಲ ಎಂಬ ಲಿಖಿತ ಭರವಸೆಯನ್ನು ನಿರ್ಮಾಪಕರು ನೀಡಬೇಕು ಎಂದು ವಾಯುಪಡೆ ಅಧಿಕಾರಿ ನೋಟೀಸ್ ನಲ್ಲಿ ಒತ್ತಾಯಿಸಿದ್ದಾರೆ.




