ಬೆಂಗಳೂರು: ಹುಕ್ಕಾದ ಎಲ್ಲಾ ಬಗೆಯ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಸೇವನೆಗೆ ಪ್ರಚೋದನೆ, ಸಂಗ್ರಹಣೆ ಮಾಡುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಆರೋಗ್ಯ ಇಲಾಖೆ ಹುಕ್ಕಾ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಆರೋಗ್ಯ ಇಲಾಖೆ ಆಧೀನ ಕಾರ್ಯದರ್ಶಿ ಪದ್ಮಾ ವಿ ಆದೇಶ ಮಾಡಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕಾಗಿ ಸಂವಿಧಾನದ 47ನೇ ವಿಧಿ ಪ್ರಕಾರ ಈ ಆದೇಶ ಹೊರಡಿಸಲಾಗಿದೆ.

ನಿಕೋಟಿನ್ ಹಾಗೂ ನಿಕೋಟಿನ್ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್, ಶಿಶಾ ಒಳಗೊಂಡ ಹುಕ್ಕಾ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕೋಟ್ಪಾ ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೋಟ್ಪಾ ಕಾಯ್ದೆಯಡಿ ಹುಕ್ಕಾವನ್ನು ತಂಬಾಕು ಎಂದು ಪರಿಗಣಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಹುಕ್ಕಾವನ್ನು ವ್ಯಸನಕಾರಿ ಉತ್ಪನ್ನ ಎಂದು ಘೋಷಣೆ ಮಾಡಿದೆ. ಹುಕ್ಕಾ ಸೇವನೆಯು ಆರೋಗ್ಯಕ್ಕೆ ಅತ್ಯಂತ ಮಾರಕ. ಹುಕ್ಕಾ ಬಾರ್‌ಗಳು ಅಗ್ನಿ ಅನಾಹುತಗಳಿಗೆ ಕಾರಣವಾಗುತ್ತಿದೆ, 45 ನಿಮಿಷದ ಹುಕ್ಕಾ ಸೇವನೆ ನೂರು ಸಿಗರೇಟ್ ಸೇವನೆಗೆ ಸಮ. ಆದ್ದರಿಂದ ಇದನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.




