MINISTER’S BREAKFAST MEETING: ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ : ಲೋಕಸಭಾ ಚುನಾವಣೆ ಸಂಬಂಧ ಚರ್ಚೆ: ಮತ್ತೆ ಇನ್ನೇನು ಇಲ್ಲ : ಸಚಿವ ಜಿ ಪರಮೇಶ್ವರ್

ಬೆಂಗಳೂರು : ಮುಂಬರುವ ಲೋಕಸಭೆ ಚುನಾವಣೆ ಸಂಬಂಧ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವುದರ ಕುರಿತು ನಿನ್ನೆ ಸಚಿವ ಕೆ.ಹೆಚ್‌.ಮುನಿಯಪ್ಪ ನಿವಾಸದಲ್ಲಿ ನಡೆದ ಬ್ರೇಕ್ ಪಾಸ್ಟ್ ಮಿಟೀಂಗ್ ನಲ್ಲಿ ಚರ್ಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ, ನಮ್ಮ ಮನೆಗೆ ತಿಂಡಿ ತಿನ್ನಲು ಬನ್ನಿ ಅಂದ್ರು, ಹೋಗಿದ್ವಿ, ಸ್ವಾಭಾವಿಕವಾಗಿ ಐದಾರು ಮಂತ್ರಿಗಳು ಭೇಟಿಯಾದಾಗ ಎನಾದ್ರು ಮಾತನಾಡಬೇಕು ಅಲ್ಲ, ಮಾತನಾಡಿದ್ದೇವೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು, ನಮ್ಮ ಕಡೆಯಿಂದ ಏನು ಸಾಧ್ಯ ಎಂಬುದನ್ನು ಚರ್ಚೆ ಮಾಡಿದ್ವಿ, ಅಭ್ಯರ್ಥಿಗಳು ಆಯ್ಕೆ ಮಾಡುವುದು, ಚುನಾವಣಾ ತಂತ್ರಗಾರಿಕೆ ಹೇಗೆ ಇರಬೇಕು, ಬೇರೆ ಪಕ್ಷಗಳು ಏನು ಮಾಡ್ತಾ ಇದ್ದಾರೆ, ನಾವು ಏನು ಮಾಡಬೇಕು ಎಂಬುದನ್ನ ನಮ್ಮ ಅನುಭವ ಮೇಲೆ ಚರ್ಚೆ ಮಾಡಿದ್ವಿ, ಅದನ್ನ ನಮ್ಮ ಸಿಎಂ, ಡಿಸಿಎಂ ಅನಿಸಿಕೆಗಳನ್ನು ತಿಳಿಸಬೇಕು ಅಂತ ಚರ್ಚೆ ಮಾಡಿದ್ದೀವಿ ಎಂದರು.

ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರೆಕೊಟ್ಟಿರುವ ಮಂಡ್ಯದಲ್ಲಿ ಬಂದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದನ್ನೆಲ್ಲಾ ಎಸ್ ಪಿ ನೋಡಿಕೊಳ್ಳುತ್ತಾರೆ, ಏನೆಲ್ಲಾ ವ್ಯವಸ್ಥೆ ಮಾಡಬೇಕು ಮಾಡ್ತೀವಿ ಎಂದರು.
ಮಾಂಸಾಹಾರದ ಬಗ್ಗೆ ನೋಡಿದವರು ಯಾರು …?
ಮಾಂಸಾಹಾರ ಸೇವಿಸಿ ಸಿಎಂ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲ ನೋಡಿದವರು ಯಾರು? ಎಂದು ಪ್ರಶ್ನಿಸಿದರು. ನಾನ್ ವೆಜ್ ತಿಂದದ್ದು ಅಂತ, ಸುಮ್ಮನೆ ಹೇಳ್ತಾರೆ, ಬೇರೆ ಕೆಲಸ ಇವೆ, ಅಭಿವೃದ್ಧಿ ಕೆಲಸ ಮಾತಾಡೋಣ ಎಂದರು.
ರಾಜ್ಯದ ಅಭಿವೃದ್ಧಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟುಕೊಂಡು ಆಡಳಿತ ಮಾಡ್ತಾ ಇದ್ದೇವೆ, ಅದರ ಬಗ್ಗೆ ಮಾತಾಡಬೇಕು, ನಮಗೆ ಜಿಎಸ್ ಟಿ ಶೇರು ಬಂದಿಲ್ಲ, ಬರಗಾಲದ ಪರಿಹಾರ ಬಂದಿಲ್ಲ, ನಿರ್ಮಲಾ ಸೀತಾರಾಮನ್ ಜವಾಬ್ದಾರಿ ಸ್ಥಾನದಲ್ಲಿ ಇದ್ದು ಸುಳ್ಳು ಹೇಳ್ತಾ ಇದ್ದಾರೆ ಎಂದು ಕಿಡಿಕಾರಿದರು.
ನಮಗೆ ಬರಗಾಲಕ್ಕೆ ಪರಿಹಾರ ಕೊಟ್ಟಿದ್ದಾರಾ, ನಿರ್ಮಲಾ ಸೀತಾರಾಮನ್ ಅವರು ಎನ್ ಡಿ ಆರ್ ಎಫ್ ನಲ್ಲಿ ಹಣ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಜನರನ್ನ ತಪ್ಪುದಾರಿಗೆ ಕರೆದುಕೊಂಡು ಹೋಗ್ತಾ ಇದ್ದಾರೆ ಅಂದ್ರೆ, ನಾವು ಕರೆದುಕೊಂಡು ಹೋಗ್ತಾ ಇದ್ದೀವಾ ಇಲ್ಲಾ ಅವ್ರಾ? 17 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದೀವಿ 1 ರೂಪಾಯಿ ಕೊಟ್ಟಿಲ್ಲ, ಎಲ್ಲ ಕೊಟ್ಟಿದ್ದೀವಿ ಅಂತ ಹೇಳಿದ್ರೆ ನಾವು ಏನು ಮಾಡೋಕೆ ಆಗುತ್ತೆ ಎಂದರು.

More News