Drought Relief Fund: ಕೇಂದ್ರ ಗೃಹ ಸಚಿವ ಅಮಿತ್ ಶಾ ಬರ ಪರಿಹಾರ ಬಿಡುಗಡೆ ಬಗ್ಗೆ ಇಂದೇ ಘೋಷಿಸಲಿ : ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು : ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದೇ ಬರ ಪರಿಹಾರ ಬಿಡುಗಡೆ ಘೋಷಣೆ ಮಾಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದು, ಈ ವೇಳೆ ಬರ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಇಲ್ಲೇ ಘೋಷಣೆ ಮಾಡಲು ಮನವಿ ಮಾಡುತ್ತೇನೆಮ ವಿಪಕ್ಷದವರು ಜನರ ಬಗ್ಗೆ ಕಾಳಜಿ ಇದ್ದರೆ ಅಮಿತ್ ಶಾರನ್ನು ಭೇಟಿಯಾಗಿ ಇಂದೇ ಪರಿಹಾರ ಹಣ ಬಿಡುಗಡೆ ಘೋಷಣೆ ಮಾಡುವಂತೆ ಒತ್ತಾಯಿಸಬೇಕು ಎಂದು ಸವಾಲು ಹಾಕಿದರು.

ವಿಪಕ್ಷದವರು ಭೇಟಿಗೆ ಪ್ರಯತ್ನವನೇ ಮಾಡಿಲ್ಲ ಅಂದರೆ ಅವರದ್ದು ನಾಟಕ ಎಂದು ಗೊತ್ತಾಗುತ್ತೆ. ಅವರು ಟೈಂ ಕೊಡುತ್ತಾರೆ ಎಂದುಕೊಂಡಿದ್ದೇನೆ. ಇವರಿಗೆ ಅಮಿತ್ ಶಾ ಟೈಂ ಕೇಳುವ ಧೈರ್ಯ ಇದಿಯಾ ಎಂಬ ಬಗ್ಗೆ ಮಾತನಾಡಲ್ಲ. ಅಮಿತ್ ಶಾ ಅವರು ಇಂದೇ ಪರಿಹಾರ ಹಣ ಬಿಡುಗಡೆ ಘೋಷಣೆ ಮಾಡಬೇಕು. ಹಾಗೆ ಮಾಡಿದರೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಬೇರೆ ರಾಜ್ಯಗಳು ಮನವಿ ಕೊಡುವ ಎರಡು ತಿಂಗಳ ಮುಂಚೆನೇ ನಾವು ಕೇಂದ್ರಕ್ಕೆ ಪರಿಹಾರ ಕೋರಿ ಮೆಮೊರಾಡಂ ಕೊಟ್ಟಿದ್ದೇವೆ. ಬರ ಪರಿಹಾರ ವಿಳಂಬ ವಿಚಾರವಾಗಿ ನಾನು ರಾಜಕೀಯ ಬೆರೆಸಲು ಹೋಗಲ್ಲ. ನಾವು ರಾಜಕೀಯ ಮಾತನಾಡಿದರೆ ಜನರಿಗೆ ನಮ್ಮಿಂದ ತೊಂದರೆ ಆಗಬಾರದು. ಹಾಗಾಗಿ ರಾಜಕೀಯ ಕಾರಣಕ್ಕೆ ವಿಳಂಬ ಮಾಡುತ್ತಿದ್ದಾರಾ, ಅಥವ ದ್ವೇಷದಲ್ಲಿ ಮಾಡುತ್ತಿದ್ದಾರಾ ಎಂದು ನಾನು ಹೇಳಲ್ಲ. ರಾಜ್ಯದ ಜನರ ತಾಳ್ಮೆ ಪರೀಕ್ಷಿಸಿದಂತೆ ಆಗುತ್ತೆ. ಇದು ರಾಜ್ಯದ ಜನರಿಗೆ ಮಾಡುವ ದ್ರೋಹ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

223 ತಾಲ್ಲೂಕುಗಳಲ್ಲಿ ಬರ ತಾಂಡವಾಡುತ್ತಿದೆ. ಬರ‌ನಿರ್ವಹಣೆಗೆ 870 ಕೋಟಿ ರಾಜ್ಯ ಸರ್ಕಾರ ಡಿಸಿ, ತಹಶೀಲ್ದಾರ್ ಖಾತೆಗೆ ನೀಡಿದೆ. ಕುಡಿಯುವ ನೀರು, ಮೇವು ನಿರ್ವಹಣೆಗೆ ಜವಾಬ್ದಾರಿ ನೀಡಿದ್ದೇವೆ. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. 431 ಟಾಸ್ಕ್ ಫೋರ್ಸ್ ಸಭೆಗಳು ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ 236 ಸಭೆಗಳು ನಡೆದಿವೆ. 183 ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು 156 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 46 ಗ್ರಾಮಗಳಲ್ಲಿ 60 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತ್ರತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ ಎಂದರು.

46 ವಾರ್ಡ್ ಗಳಲ್ಲಿ 12 ಟ್ಯಾಂಕರ್ ಮೂಲಕ‌ ನೀರು ಸರಬರಾಜು ಮಾಡಲಾಗುತ್ತಿದೆ. 7082 ಗ್ರಾಮಗಳಲ್ಲಿ ಮುಂದೆ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿದ್ದೇವೆ. ಸದ್ಯ 202 ಗ್ರಾಮಗಳಲ್ಲಿ ಮಾತ್ರ ಸಮಸ್ಯೆ ಇದೆ. 1193 ವಾರ್ಡ್ ಗಳಲ್ಲಿ ಸಮಸ್ಯೆ ಬರಬಹುದು ಎಂದು ಸಮಸ್ಯಾತ್ಮಕ ಪಟ್ಟಿ ಮಾಡಿದ್ದೇವೆ. ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಸರಬರಾಜಿಗೆ ಟೆಂಡರ್ ಕರೆದು ಬಾಡಿಗೆ ಪಡೆದು ಸಮಸ್ಯೆ ಬಂದರೆ ಅವುಗಳನ್ನು 24 ತಾಸಿನಲ್ಲಿ ಸಿದ್ಧಗೊಳಿಸಲಾಗುವುದು ಎಂದರು.

2,654 ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆ ಪಡೆಯಲು ಒಪ್ಪಂದ ಮಾಡುತ್ತಿದ್ದೇವೆ. ಆರ್ ಡಿಪಿಆರ್ ಗೆ ಹೊಸ ಬೋರ್ ವೆಲ್ ಕೊರೆಯಲು ಅನುಮತಿ ನೀಡಲು ಸಿಎಂ ಸೂಚಿಸಿದ್ದಾರೆ. ಜನವರಿ ಬಳಿಕ ಮೇವಿನ‌ ಕೊರತೆ ಸಂಬಂಧ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಉಚಿತವಾಗಿ ಕೊಡಲಾಗುವುದು. ನವೆಂಬರ್ ತಿಂಗಳಲ್ಲಿ ಏಳು ಲಕ್ಷ ಮೇವಿನ ಕಿಟ್ ಈಗಾಗಲೇ ನೀಡಲಾಗಿದೆ. ಮೇವಿನ ಬ್ಯಾಂಕ್, ಗೋಶಾಲೆ ಬೇಕು ಅಂದರೆ ಟಾಸ್ಕ್ ಫೋರ್ಸ್ ನಲ್ಲಿ ಚರ್ಚೆ ಮಾಡಿ ಡಿಸಿಗಳು ನಿರ್ಧರಿಸಲಿದ್ದಾರೆ. 870 ಕೋಟಿ ರೂ.‌ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸೆಪ್ಬೆಂಬರ್ 13 ಬರ ಘೋಷಣೆ ಮಾಡಲಾಗಿದೆ. ಸೆ.23ಗೆ ಕೇಂದ್ರಕ್ಕೆ ಪರಿಹಾರ ಕ್ರಮ‌ಕೈಗೊಳ್ಳಲು, ಪರಿಹಾರ ನೀಡಲು ಮೆಮೊರಾಡಂ ನೀಡಿದ್ದೇವೆ. 223 ತಾಲೂಕಿಗೆ 18,172 ಕೋಟಿ ಬರ ಪರಿಹಾರ ಕೋರಿ‌ ಮನವಿ ಮಾಡಿದ್ದೇವೆ. 4,663 ಕೋಟಿ ರೈತರ ಬೆಳೆ ನಷ್ಟ ಪರಿಹಾರ ಎನ್ ಡಿಆರ್ ಎಫ್ ನಡಿ ಕೇಳಿದ್ದೇವೆ. ಕೇಂದ್ರಕ್ಕೆ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ. ಈ ಸಂಬಧ ಡಿ.23 ಸಭೆ ಮಾಡುವುದಾಗಿ ಕೇಂದ್ರ ಗೃಹ ಸಚಿವರು ಹೇಳಿದ್ದರು. ಆ ಬಳಿಕ ಜ. 16 ಸಭೆ ಮಾಡುತ್ತೇವೆ ಎಂದು ಹೇಳಲಾಗಿತ್ತು. ಆದರೂ ಸಭೆ ಆಗಿಲ್ಲ. ಮನವಿ ಕೊಟ್ಡು ನಾಲ್ಕು ವರೆ ತಿಂಗಳಾದರೂ ಪರಿಹಸರ ಬಿಡುಗಡೆ ಮಾಡಿಲ್ಲ ಎಂದು ಕಿಡಿ ಕಾರಿದರು.

33 ಲಕ್ಷ ರೈತರಿಗೆ ಪರಿಹಾರ ಹಣ ಜಮೆ:

ರೈತರ ಸಮಸ್ಯೆಗೆ ಸ್ಪಂದಿಸಿ ಗರಿಷ್ಟ 2000 ರೂ. ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 33 ಲಕ್ಷ ರೈತರಿಗೆ 628 ಕೋಟಿ ಹಣವನ್ನು ನೇರವಾಗಿ ಜಮೆ ಮಾಡಲಾಗಿದೆ. 1.60 ಲಕ್ಷ ರೈತರ ಖಾತೆಗೆ ಹಣ ಜಮೆಯಾಗುವ ಹಂತದಲ್ಲಿದೆ ಎಂದರು.

ಕಳೆದ ಬಾರಿ ಪರಿಹಾರ ಹಣದ ದುರುಪಯೋಗ ಆಗಿತ್ತು. ಲೂಟಿ ಮಾಡುತ್ತಿದ್ದರೂ ಅಧಿಕಾರಿಗಳ ವಿರುದ್ಧ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅನರ್ಹರಿಗೂ ನೆರೆ ಪರಿಹಾರ ಹಣ ನೀಡಲಾಗಿತ್ತು. ನಾವು ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ರೈತರಿಗೆ ಬಿಕ್ಷೆ ಕೊಟ್ಟಂತೆ ಆಗಬಾರದು ಎಂದು ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ.‌ಪ್ರತಿ ಗ್ರಾಮ ಪಂ. ವ್ಯಾಪ್ತಿಯಲ್ಲಿ ಯಾರ ಖಾಗೆಗಳಿಗೆ ಎಷ್ಟು ಹಣ ಹೋಗಿದೆ ಎಂಬ ವಿವರ ಪ್ರಕಟಿಸಲು ಸೂಚನೆ ನೀಡಲಾಗಿದೆ. ಯಾವುದಾದರು ರೈತ ಬಿಟ್ಟು ಹೋಗಿದ್ದರೆ ಕೃಷಿ ಇಲಾಖೆ, ಕಂದಾಯ ಇಲಾಖೆಯನ್ನು ಸಂಪರ್ಕಿಸಲಿ ಎಂದು ಮನವಿ ಮಾಡಿದರು.

ಮಿಸ್ ಲೀಡಿಂಗ್ ಹೇಳಿಕೆ:

ಎನ್‌ಡಿಆರ್ ಎಫ್ ಹಣ ಬಿಡುಗಡೆ ಮಾಡಲಾಗಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎನ್ ಡಿಆರ್ ಎಫ್ ನಡಿ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ನಾವು ವಾಸ್ತವಾಂಶ ಹೇಳುತ್ತೇವೆ. ಅವರು ಏನೋ ಹೇಳುತ್ತಾರೆ. ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಶ್ರೀಮಂತರಿಗೆ ನೀಡುವುದು ಬಿಟ್ಟಿ ಭಾಗ್ಯವಲ್ಲವಾ?:

ಇದು ನಮ್ಮ ಸಂವಿಧಾನದ ಹಕ್ಕು, ನಾವು ಯಾವುದು ಬಿಟ್ಟಿ ಕೊಟ್ಟಿಲ್ಲ. ಅದಾನಿಗೆ, ಅಂಬಾನಿಗೆ ನೀಡಿದ ವಿನಾಯಿತಿ ಬಿಟ್ಟಿ ಭಾಗ್ಯ ಅಲ್ಲವಾ?. ಶ್ರೀಮಂತರಿಗೆ ನೀಡುವ ವಿನಾಯಿತಿ ಬಿಟ್ಟಿ ಭಾಗ್ಯ ಅಲ್ಲವಾ?. ಬಡವರಿಗೆ ಕೊಡುವ ಸಹಾಯ ಇವರಿಗೆ ಬಿಟ್ಟಿ ಭಾಗ್ಯನಾ?. ರೈತರಿಗೆ ಕೊಡುವ ನೆರವು ಇವರಿಗೆ ಬಿಟ್ಟಿ ಭಾಗ್ಯ. ಬಿಜೆಪಿಯವರಿಗೆ ಬಡವರನ್ನು ಕಂಡರೆ ತಾತ್ಸರಾ ಅಷ್ಟೇ ಅಲ್ಲ ಆಕ್ರೋಶ ಕೂಡ ಇದೆ. ಗ್ಯಾರಂಟಿ ಎಂಬ ಪದ ಶುರುವಾಗಿದ್ದು ಕರ್ನಾಟಕದಿಂದ. ಈಗ ಬಿಜೆಪಿಯವರೇ ಆ ಪದ ಕಿತ್ತು ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು‌.

ನನ್ನ ಮೇಲೆ ಏಕೆ ನಿಮಗೆ ಅಸಮಾಧಾನ:

ಲೋಕಸಭೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪರೋಕ್ಷವಾಗಿ ಸ್ಪರ್ಧೆಗೆ ಸಿದ್ದವಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ನಾನು ಈಗಾಗಲೇ ಎರಡು ಬಾರಿ ಸ್ಪರ್ಧೆ ಮಾಡಿದ್ದೇನೆ. ಬೆಂಗಳೂರು ಉತ್ತರದಲ್ಲೂ ಸ್ಪರ್ಧೆ ಮಾಡಿದ್ದೆ. 2009 ರಲ್ಲಿ ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧೆ ಮಾಡಿದ್ದೆ. ಪಕ್ಷ ಹೇಳಿದ ಮೇಲೆ ಸ್ಪರ್ಧೆ ಮಾಡಿದ್ದೆ. ನನ್ನ ಮೇಲೆ ಯಾಕಪ್ಪ ನಿಮಗೆ ಅಸಮಾಧಾನ ಎಂದು ಪ್ರಶ್ನಿಸಿದರು.

More News