ಹಾವೇರಿ : ನಾನು ರಾಜಿ ಆಗೋ ಪ್ರಶ್ನೆಯೇ ಇಲ್ಲ. ನಾನು ಅಪ್ಪ- ಮಕ್ಕಳ ಜತೆ ರಾಜಿ ಆಗಬೇಕಾ..? ನಾನೇನು ಲೋಕಸಭಾ ಚುನಾವಣೆ ಟಿಕೆಟ್ ಕೇಳಿದ್ದೀನಾ ?ವಿಜಯೇಂದ್ರ ಜತೆ ನನಗೇನು ಆಗಬೇಕಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಅಪ್ಪ-ಮಕ್ಕಳ ವಿರುದ್ಧ ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ- ಮಕ್ಕಳ ಜತೆ ನನ್ನದು ಏನೂ ವ್ಯವಹಾರ ಇಲ್ಲ, ಹಾಗಿದ್ದಾಗ ನಾನು ಯಾರ ಜೋಡಿ ರಾಜೀ ಆಗಬೇಕು ಎಂದು ಪ್ರಶ್ನಿಸಿದರು.
ಸೋಮಣ್ಣ ಅವರನ್ನು ಎರಡು ಕಡೆ ನಿಲ್ಲಿಸಿ ಕೆಡವಿದರು. ನನ್ನನ್ನು ಹಾಗೆಯೇ ಬೊಮ್ಮಾಯಿ ಅವರನ್ನು ಸೋಲಿಸೋಕೆ ಎಷ್ಟೇಷ್ಟು ದುಡ್ಡು ಕಳುಹಿಸಿದ್ರು ಅನ್ನೋದು ಗೊತ್ತಿದೆ. ಎಲ್ಲಾ ಇತಿಹಾಸವನ್ನ ಲೋಕಸಭೆ ಚುನಾವಣೆ ಬಳಿಕ ಬಿಚ್ಚಿಡುತ್ತೇನೆ. ನನ್ನನ್ನು ಅಂಜಿ ಓಡಿ ಹೋಗಿ ರಾಜಿ ಆದ ಅನ್ನಬೇಡಿ, ಯಾವ ವಿಜಯೇಂದ್ರಗೂ ಅಂಜಲ್ಲ, ಅವರ ಅಪ್ಪನಿಗೂ ಅಂಜಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆಗೆ ಹೋಗತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ವಿಜಯೇಂದ್ರ ಬರಲಿ ಬಿಡಲಿ ನಾವು ಗೆಲ್ಲುತ್ತೇವೆ. ಅಯೋಧ್ಯೆ ಶ್ರೀರಾಮನ ಆಶೀರ್ವಾದದ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿದೆ ಎಂದು ತಿಳಿಸಿದರು.
ಸದ್ಯದಲ್ಲೇ ಡಿಕೆ ಶಿವಕುಮಾರ್ ಸೆಟ್ಲಮೆಂಟ್ ಆಗಲಿದೆ
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೆ ಎಸ್ ಈಶ್ವರಪ್ಪನವರಿಗೆ ಸೆಟ್ಲಮೆಂಟ್ ಮಾಡುತ್ತೇನೆ ಎಂಬ ವಿಚಾರ ನಿಜವಾಗಿಯೂ ಹಾಸ್ಯಾಸ್ಪದ ಎಂದು ಹೇಳಿದ ಯತ್ನಾಳ್, ಅವರು ಸೆಟ್ಲಮೆಂಟ್ ಮಾಡಿಕೊಂಡೆ ಹೊರಗಿದ್ದಾರೆ. ಇನ್ನು ಮುಂದೆ ಡಿ ಕೆ ಶಿವಕುಮಾರ್ ಅವರ ಸೆಟ್ಲಮೆಂಟ್ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ದೇಶ ವಿಭಜನೆಯ ಬಗ್ಗೆ ಮಾತನಾಡಿದ ಸಂಸದ ಡಿ ಕೆ ಶಿವಕುಮಾರ್ ಅವರಿಗೆ ಷೋಕಾಸ್ ನೋಟೀಸ್ ಕೂಡ ನೀಡಿಲ್ಲ. ಅಂದರೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ದೇಶ ವಿಭಜನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಆರೋಪಿಸಿದರು.