ನವದೆಹಲಿ : ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಕಳೆದ ಸುಮಾರು ಹತ್ತು ತಿಂಗಳಿಂದ ದೆಹಲಿಯ ಗಡಿಭಾಗ ಮತ್ತು ಇನ್ನಿತರ ಕಡೆಗಳಲ್ಲಿ ರೈತರು ಕೃಷಿ ಕಾಯಿದೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದರು. ಈ ಹೋರಾಟಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಅಧಿವೇಶನದಲ್ಲಿ ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ದೇಶದ ಜನತೆಯನ್ನು ಉದ್ದೇಶಿಸಿ ಇಂದು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ವಾಪಾಸ್ ಪಡೆಯಲಾಗುವುದು ಎಂದು ಘೋಷಿಸಿದರು. ಗುರುನಾನಕ್ ಜಯಂತಿಯ ದಿನವಾದ ಇಂದು ದೇಶವಾಸಿಗಳ ಮುಂದೆ ರೈತ ಮಸೂದೆಯನ್ನು ವಾಪಾಸ್ ಪಡೆಯುವ ನಿರ್ಧಾರ ಪ್ರಕಟಿಸುತ್ತಿದ್ದೇನೆ ಎಂದು ಹೇಳಿದರು.
ರೈತರು ತಮ್ಮ ಪ್ರತಿಭಟನೆಯನ್ನು ಮನೆಗಳಿಗೆ ಹಿಂದಿರುಗುವಂತೆ ಮನವಿ ಮಾಡಿದರು. ಮೂರು ಕೃಷಿ ಕಾನೂನುಗಳಿಂದ ವಿಶೇಷವಾಗಿ ಸಣ್ಣ ರೈತರನ್ನು ಸಬಲೀಕರಣಗೊಳಿಸುವುದಾಗಿತ್ತು. ಆದರೆ, ಒಂದು ವರ್ಗದ ರೈತರ ಮನವೊಲಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ, ಇದರಿಂದ ವಾಪಾಸ್ಸು ಪಡೆಯುತ್ತಿದ್ದೇನೆ ಎಂದು ಪ್ರಧಾನಿ ವಿವರಿಸಿದರು.
ಐದು ರಾಜ್ಯಗಳ ಚುನಾವಣೆ : ರಾಜಕೀಯ ನಡೆ
ಮುಂದಿನ ವರ್ಷ ಮಹತ್ವದ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆ ಎದುರಾಗಲಿದೆ. ಇದರಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಸೇರಿವೆ, ಈ ಹಿನ್ನೆಲೆಯಲ್ಲಿ ಈ ವಿವಾದಿತ ಕಾಯಿದೆಗಳನ್ನು ಪ್ರಧಾನಮಂತ್ರಿ ಅವರು ಹಿಂಪಡೆದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳಾಗಿವೆ. ಇದೊಂದು ಕೇವಲ ರಾಜಕೀಯ ನಡೆ, ಚುನಾವಣೆ ಸಂದರ್ಭದಲ್ಲಿ ಅನಗತ್ಯ ವಿವಾದಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶಿಂದ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಂತಿದೆ.
ಈ ಮೂರು ಕೃಷಿ ತಿದ್ದುಪಡಿ ಮಸೂದೆಗಳಿಗೆ ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಇನ್ನಿತರ ರಾಜ್ಯಗಳ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಮಸೂದೆಗಳು ರೈತರಿಗೆ ಸಹಾಯಕಾರಿಯಾಗಲಿವೆ ಎಂದು ಕೇಂದ್ರ ಹೇಳಿತ್ತು. ಆದರೆ, ರೈತರು ಯಾವುದೇ ಕಾರಣಕ್ಕೂ ಈ ಮಸೂದೆಗಳನ್ನು ಸ್ವಾಗತಿಸಲ್ಲ, ವಿರೋಧಿಸುತ್ತೇವೆ ಎಂದು ಹೇಳಿ ಪ್ರತಿಭಟನೆ ನಡೆಸುತ್ತಲೆ ಬಂದಿದ್ದರು.
ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ- 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ – 2020; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ- 2020ನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು.
ಅಮಿತ್ ಷಾ ಸೇರಿದಂತೆ ಇನ್ನಿತರರು ನಡೆಸಿದ ಹತ್ತಕ್ಕೂ ಹೆಚ್ಚಿನ ಸಭೆ ಪ್ರಯೋಜನವಾಗಲಿಲ್ಲ
ರೈತರೊಂದಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ಗೃಹ ಸಚಿವ ಅಮಿತ್ ಶಾ ಮೊದಲಾದವರು ಹತ್ತಕ್ಕೂ ಹೆಚ್ಚು ಬಾರಿ ಔಪಚಾರಿಕ ಮಾತುಕತೆ, ಸಭೆ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಜನವರಿ 26ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಯದಲ್ಲಿ ತೀವ್ರ ಹಿಂಸಾಚಾರ, ಪ್ರತಿಭಟನೆ ಕೂಡ ನಡೆದಿತ್ತು.
ಉತ್ತರಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ವಾಹನ ಚಲಾಯಿಸಿ ಐವರು ರೈತರ ಸಾವಿಗೆ ಕಾರಣವಾಗಿದ್ದರು. ಹಾಗೆಯೇ, ರೈತರು ತಕ್ಷಣವೇ ಆಕ್ರೋಶ ವ್ಯಕ್ತಪಡಿಸಿ ವಾಹನಕ್ಕೆ ಬೆಂಕಿ ಹಚ್ಚಿದ್ದರು. ವಾಹನದಲ್ಲಿದ್ದ ಮೂರು ಅಸುನೀಗಿದ್ದನ್ನು ಇಲ್ಲಿ ಸ್ಮರಿಸಬಹುದು.




