ನವದೆಹಲಿ : ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಸಿಂಘು, ಘಾಜಿಪುರ್ ಮತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ.
ಪ್ರತಿಭಟನಾಕಾರರು ದೆಹಲಿಗೆ ತೆರಳದಂತೆ ಗಡಿಯಲ್ಲಿಯೇ ಸುಮಾರು ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ. ಪೊಲೀಸರು, ಕಾಂಕ್ರಿಟ್ ತಡೆಗೋಡೆ, ಮುಳ್ಳುತಂತಿಗಳನ್ನು ರಸ್ತೆಗಳಲ್ಲಿ ಅಳವಡಿಸಲಾಗಿದೆ. ಇದರಿಂದ ದೆಹಲಿಯಲ್ಲಿ ಇಂದೇ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಕಚೇರಿಗೆ ಹಾಗೂ ಅಗತ್ಯ ಕೆಲಸಗಳಿಗೆ ತೆರಳುವವರು ಸುತ್ತು ಹಾಕಿ ತೆರಳಬೇಕಾದ ಅನಿವಾರ್ಯ ಒದಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಹಲವು ರೈತ ಸಂಘಟನೆಗಳು ನಾಳೆ ಪ್ರತಿಭಟನೆ ನಡೆಸಲಿವೆ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ಕೊಟ್ಟಿರುವ ದೆಹಲಿ ಚಲೋಗೆ ದೇಶದ ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರತಿಭಟನೆ ಸಾಗುವ ರಸ್ತೆಯಲ್ಲಿ ಇಂದಿನಿಂದಲೇ ಸಂಚಾರವನ್ನು ಬಂದ್ ಮಾಡಲಾಗಿದೆ. ರಸ್ತೆಗೆ ಅಡ್ಡಲಾಗಿ ದೊಡ್ಡ ದೊಡ್ಡ ಕಂಟೈನರ್ ಗಳನ್ನು ಹಾಗೂ ಬುಲ್ಡೋಜರ್ ಗಳನ್ನು ಅಡ್ಡಲಾಗಿ ಇಡಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಈಶಾನ್ಯ ದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುಮಾರು 5000 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.