KANNADA MUST IN NAMEPLATE: ನಾಮಫಲಕದಲ್ಲಿ ಶೇಕಡಾ 60 ಕನ್ನಡ ಕಡ್ಡಾಯ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಮಂಡನೆ

ವಿಧಾನಸಭೆ : ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ವಿಚಾರವಾಗಿ 2024 ನೇ ಸಾಲಿನ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ( ತಿದ್ದುಪಡಿ) ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.
ಶೇಕಡಾ 60% ಕನ್ನಡ ಹಾಗೂ 40% ಇತರ ಭಾಷೆಯಲ್ಲಿ ನಾಮಫಲಕದಲ್ಲಿ ಕಡ್ಡಾಯವಾಗಿರಬೇಕು. ವಿಧೇಯಕದ ಪ್ರಕಾರ ವಾಣಿಜ್ಯ ಕೈಗಾರಿಕೆ, ಉದ್ಯಮ, ಟ್ರಸ್ಟ್, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ, ಹೋಟೆಲ್ ನಾಮಫಲಕದಲ್ಲಿ 60% ಕನ್ನಡ ಕಡ್ಡಾಯವಾಗಿರಬೇಕು.

ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಚಿವರ ಪರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ವಿಧೇಯಕ ಮಂಡನೆ ಮಾಡಿದರು. ಕನ್ನಡ ನಾಮಫಲಕದ ಪರವಾಗಿ ಹೋರಾಟ ಮಾಡಿದ್ದ ಕನ್ನಡ ಪರ ಸಂಘಟನೆಗಳು, ಕನ್ನಡ ಸಂಘಟನೆಗಳ ಒತ್ತಡಕ್ಕೆ ಮಣಿದು 60%, 40% ಕಾನೂನು‌ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧಾರಿಸಿತ್ತು.
ಈ ಕುರಿತಾಗಿ ಈ ಹಿಂದೆ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತ್ತು. ಆದರೆ ಇದಕ್ಕೆ ರಾಜ್ಯಪಾಲರು ಅನುಮೋದನೆ ನೀಡದೆ ವಾಪಸ್ ಕಳಿಸಿದ್ದರು. ಈ ಹಿನ್ನಲೆಯಲ್ಲಿ ಕಾನೂನು ಜಾರಿಗೆ ತರಲು ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ವಿಧೇಯಕದಲ್ಲಿನ ಪ್ರಮುಖ ಹೈಲೈಟ್ಸ್ ಹೀಗಿದೆ
ರಸ್ತೆಗಳು, ಬಡಾವಣೆ ಪ್ರದೇಶದ ನಾಮಫಲಕದಲ್ಲೂ ಕನ್ನಡ ಕಡ್ಡಾಯ
ರಾಜ್ಯದೊಳಗೆ ತಯಾರಿಸಿದ ಉತ್ಪನ್ನಗಳ ಹೆಸರು, ಮಾಹಿತಿಯಲ್ಲೂ ಇತರ ಭಾಷೆಯ ಜೊತೆಗೆ ಕನ್ನಡ ಕಡ್ಡಾಯ
100 ಕ್ಕೂ ಹೆಚ್ಚು ಉದ್ಯೋಗಿಗಳನ್ನು‌ ಹೊಂದಿರುವ ರಾಜ್ಯ, ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡ ಕೋಶ ಸ್ಥಾಪನೆಗೆ ಸೂಚನೆ.
ದಿನ ನಿತ್ಯದ ವ್ಯವಹಾರಗಳ ನಿರ್ವಹಣೆಯಲ್ಲಿ ಕನ್ನಡ ಭಾಷೆ ಬಳಕೆಗೆ ಹಿರಿಯ ಉದ್ಯೋಗಿಗಳ ನೇತೃತ್ವದಲ್ಲಿ ಕನ್ನಡ ಕೋಶ ಸ್ಥಾಪಿಸಲು ಸೂಚನೆ.
ಕನ್ನಡ ಭಾಷೆ ಮಾತನಾಡಲು ಬಾರದ ಉದ್ಯೋಗಿಗಳಿಗೆ ಕನ್ನಡ ಪರಿಚಯಿಸಲು ಕನ್ನಡ ಕಲಿಕಾ ಘಟಕ ಸ್ಥಾಪಿಸಲು ಸೂಚನೆ
ರಾಜ್ಯದಲ್ಲಿನ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರ ಜೊತೆಗಿನ ಸಂಪರ್ಕ, ಪತ್ರ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು ಎನ್ನುವುದು ವಿಧೇಯಕದಲ್ಲಿನ ಪ್ರಮುಖ ಅಂಶಗಳಾಗಿವೆ.

More News