ವಿಧಾನಸಭೆ: ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಸರ್ಕಾರವನ್ನು ಒತ್ತಾಯಿಸಿದರು.
ಗಮನ ಸೆಳೆಯುವ ಸೂಚನೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಸದಸ್ಯ ರವಿ ಕುಮಾರ್ ಗಣಿಗ ಅವರು, ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಅವರನ್ನು ಬಿಡಿಸುತ್ತಾರೆ ಎಂದು ರವಿ ಗಣಿಗ ಗಂಭೀರ ಆರೋಪ ಮಾಡಿದರು.
ಮಂಡ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಿಂದ ಯುವಕರ ಜೀವನ ಹಾಳಾಗುತ್ತಿದೆ, ಬೆಟ್ಟಿಂಗ್ ನಲ್ಲಿ 11 ಸಾವಿರಕ್ಕೆ ಯುವಕನ ಕೊಲೆ ನಡೆಯುತ್ತದೆ, ಮಂಡ್ಯದ ಪ್ರತಿ ಮನೆಯಲ್ಲಿ ಯುವಕರು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದಾರಕೆ ಎಂದು ಆರೋಪಿಸಿದರು.

ದಂಧೆಕೋರರು ಯುವಕರ ಆಸ್ತಿ, ಬೈಕ್ ನ್ನು ಕಿತ್ತು ಕೊಳ್ಳುತ್ತಿದ್ದಾರೆ, ಕ್ರಿಕೆಟ್ ಬೆಟ್ಟಿಂಗ್ ನಡೆಸುವವರು ಮೂರು ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದಾರೆ, ಮಂಡ್ಯಕ್ಕೆ ಬಂದಿದ್ದ ಮಾಜಿ ಸಿಎಂ ಒಬ್ಬರು ಕ್ರಿಕೆಟ್ ಬುಕ್ಕಿಯನ್ನು ಬಿಡುಗಡೆ ಮಾಡಲು ಎಸ್ ಪಿ ಗೆ ಕರೆ ಮಾಡಿದ್ದರು ಎಂದು ಆರೋಪಿಸಿದ ಅವರು, ರಾಜಕಾರಣಿಗಳು ಕ್ರಿಕೆಟ್ ಬುಕ್ಕಿಗಳಿಗೆ ಬೆಂಬಲ ನೀಡುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬುಕ್ಕಿಗಳನ್ನು ಮಟ್ಟ ಹಾಕಬೇಕು. ಇವರ ಜೊತೆಗಿನ ಪೊಲೀಸರ ಹೊಂದಾಣಿಕೆ ತಪ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆರ್ ಅಶೋಕ್ ದನಿಗೂಡಿಸಿ, ಒಂದು ಕ್ರಿಕೆಟ್ ಮ್ಯಾಚ್ ನಲ್ಲಿ ಒಂದು ಸಾವಿರ ಕೋಟಿ ಬೆಟ್ಟಿಂಗ್ ನಡೆಯತ್ತದೆ, ಇದು ಕೇವಲ ಮಂಡ್ಯ ಮಾತ್ರವಲ್ಲ, ಬೆಂಗಳೂರಿನಲ್ಲೂ ನಡೆಯುತ್ತದೆ, ಇವರಾರು ಪೊಲೀಸರಿಗೆ ಬಗ್ಗಲ್ಲ ಎಂದು ಹೇಳಿದರು.

ಸದನದಲ್ಲಿ ಇರುವವರೇ ಇವರ ಪರವಾಗಿ ರೆಕಮೆಂಡ್ ಮಾಡಲು ಬರ್ತಾರೆ, ಇದನ್ನು ಮಟ್ಟ ಹಾಕಲು ವಿಶೇಷ ಘಟಕ ಮಾಡಿ ಎಂದು ಮನವಿ ಮಾಡಿದರು. ಇದೇ ವೇಳೆ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳಿಕೊಂಡ ಬಿಜೆಪಿ ಸದಸ್ಯ ಶರಣು ಸಲಗಾರ್, ರಾಜ್ಯದಲ್ಲಿ ಅತ್ಯಂತ ಅಪಾಯಕಾರಿ ವಿಷಯ ಕ್ರಿಕೆಟ್ ಬೆಟ್ಟಿಂಗ್ ಹಾಗೂ ರಮ್ಮಿ ಗೇಮ್ ಎಂದರು.
ಹೋಂ ಮಿನಿಸ್ಟರ್ ಆದೇಶ ಮಾಡಿದರೆ ಸಂಜೆಯ ಒಳಗೆ ಅವರು ಬಿಲ ಸೇರುತ್ತಾರೆ, ಹೀಗೆ ಬಿಟ್ಟರೆ ಕ್ರಿಕೆಟ್ ಬೆಟ್ಟಿಂಗ್ ನಡೆಸುವ ಐವತ್ತು ಜನ ಶಾಸಕರಾಗ್ತಾರೆ, ಇದನ್ನು ಮಟ್ಟ ಹಾಕಿದರೆ ಗೃಹ ಸಚಿವರು ದೇವರಾಗ್ತಾರೆ ಎಂದರು.

ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಗಂಭೀರ ಕ್ರಮ
ಕ್ರಿಕೆಟ್ ಬೆಟ್ಟಿಂಗ್ ಅನ್ನೋದು ರಾಜ್ಯವ್ಯಾಪಿ ನಡೆಯುತ್ತಿರುವ ದಂಧೆ, ಇದನ್ನು ನಿಲ್ಲಿಸಬೇಕೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಮುಂದಿನ ದಿನ ಇದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ವಹಿಸುತ್ತೇವೆ ೆಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸದನಕ್ಕೆ ತಿಳಿಸಿದರು.
ರಾಜ್ಯದ ವತಿಯಿಂದ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ, ಕೇಂದ್ರ ಸರ್ಕಾರವೂ ಈ ಬಗ್ಗೆ ಕ್ರಮ ವಹಿಸುವ ಅಗತ್ಯ ಇದೆ ಎಂದರು.
ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲು ಯೋಜಿಸಿದ್ದೇವೆ, ಈ ವರೆಗೆ ಸುಮಾರು 6,764 ಪ್ರಕರಣ ದಾಖಲು ಮಾಡಿದ್ದೇವೆ, ಎಂಟು ತಿಂಗಳಲ್ಲಿ 9,645 ಕೆಜಿ ಗಾಂಜಾ ವಶಪಡಿಸಲಾಗಿದೆ. 233 ಕೆಜಿ ಸಿಂಟೆತೆಕ್ಸ್ ಡ್ರಗ್ಸ್ ವಶ ಮಾಡಿದ್ದೇವೆ, ಎಲ್ಲಾ ಜಿಲ್ಲೆಗಳನ್ನು ಡ್ರಗ್ಸ್ ಮುಕ್ತ ಮಾಡುವಂತೆ ಎಸ್ ಪಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.
ಶಾಲೆಗಳಲ್ಲಿ ಮಕ್ಕಳಿಗೆ ಚಾಕಲೇಟ್ ನಲ್ಲಿ ಡ್ರಗ್ಸ್ ಕೊಡುತ್ತಾರೆ, ಡ್ರಗ್ಸ್ ಆರೋಪಿತ 245 ಜನ ವಿದೇಶಿಗರನ್ನು ಡಿಪೋರ್ಟ್ ಮಾಡಿದ್ದೇವೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.




