ಬೆಂಗಳೂರು : ತೆರಿಗೆ ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿನ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಒಡೆತನದ ರಾಕ್ ಲೈನ್ ಮಾಲ್ ಗೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಬೀಗ ಹಾಕಿದ್ದಾರೆ.
ರಾಕ್ ಲೈನ್ ಮಾಲ್ ನಿಂದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಹಲವು ಬಾರಿ ನೋಟೀಸ್ ನೀಡಿದರೂ ಕೂಡ ತೆರಿಗೆ ಪಾವತಿ ಮಾಡದೇ ಇದ್ದ ಕಾರಣಕ್ಕಾಗಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎನ್ ಆರ್ ರಮೇಶ್ ಅವರು 2021 ರಲ್ಲಿ ರಾಕ್ ಲೈನ್ ವೆಂಕಟೇಶ್ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ 8.5 ಕೋಟಿಗೂ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.
ರಾಕ್ ಲೈನ್ ಮಾಲ್ ಕೇವಲ 48.500 ಚದರ ಅಡಿ ವಿಸ್ತೀರ್ಣದಲ್ಲಿ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದರು. ಆದರೆ, ಅದು ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಮಾಲ್ ನಿರ್ಮಾಣಗೊಂಡಿದೆ ಎಂದು ಅವರು ದೂರು ನೀಡಿದ್ದರು.
ಈ ಸಂಬಂಧ ಮಹಾಲೆಕ್ಕ ಪರಿಶೋಧಕರ ಕಚೇರಿ ಅಧಿಕಾರಿಗಳ ಮತ್ತು ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ 74,243 ಚದರ ಅಡಿ ವಿಸ್ತೀರ್ಣವನ್ನು ಮುಚ್ಚಿಟ್ಟು ಪಾಲಿಕೆಗೆ ತೆರಿಗೆ ವಂಚಿಸಲಾಗಿದೆ ಎಂದು ವರದಿ ಹೇಳಿತ್ತು.
ಬಡ್ಡಿ ಸೇರಿದಂತೆ 2.63 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ 2015ರಲ್ಲಿಯೇ ಬಿಬಿಎಂಪಿ ರಾಕ್ ಲೈನ್ ವೆಂಕಟೇಶ್ ಅವರಿಗೆ ನೋಟಿಸ್ ನೀಡಿತ್ತು. ಆದರೆ ಪಾಲಿಕೆಯ ನೀಡಿದ್ದ ನೋಟಿಸ್ ಪ್ರಶ್ನಿಸಿ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಇತ್ತೀಚೆಗೆ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದ್ದರು. ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ವಾರ್ಷಿಕ ಬಡ್ಡಿ, ದಂ ಸೇರಿ ಒಟ್ಟು 8.51 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




