ಬೆಂಗಳೂರು : ರಾಜ್ಯಸಭಾ ಚುನಾವಣಾ ಅಖಾಡಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಎಂಟ್ರಿಯಾಗಿದ್ದು, ರಾಜ್ಯಸಭಾ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅಖಾಡಕ್ಕೆ ಇಳಿಯಲಿದ್ದಾರೆ.
ಕುಪೇಂದ್ರ ರೆಡ್ಡಿ ಅವರು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ಶಾಸಕರ ಮತಗಳು, ಬಿಜೆಪಿಯ ಹೆಚ್ಚುವರಿ ಮತಗಳು ಹಾಗೂ ಜೊತೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪುಟ್ಟಸ್ವಾಮಿಗೌಡ ಮತಗಳ ಮೇಲೆ ಕಣ್ಣು ಇಟ್ಟಿರುವ ಮೈತ್ರಿ ಪಕ್ಷಗಳು ಕಾಂಗ್ರೆಸ್ ನಿಂದ ಅಡ್ಡ ಮತದಾನ ಮಾಡಿಸಿ ಕುಪೇಂದ್ರ ರೆಡ್ಡಿ ಜಯಕ್ಕೆ ಶ್ರಮಿಸಲಿವೆ ಎಂದು ತಿಳಿದುಬಂದಿದೆ.
ಈಗಾಗಲೇ ಗಾಲಿ ಜನಾರ್ದನ ರೆಡ್ಡಿ ಜೊತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಕುಪೇಂದ್ರ ರೆಡ್ಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ, ಜನಾರ್ಧನ ರೆಡ್ಡಿ ಮತಗಳಿಂದ ಜಯಭೇರಿಗೆ ಪ್ಲಾನ್ ಮಾಡಿವೆ ಎನ್ನಲಾಗಿದೆ.
ಜೆಡಿಎಸ್ ಶಾಸಕ ಶರಣ್ ಗೌಡ ಕುಂದಕೂರ್ ಮೈತ್ರಿ ವಿರೋಧಿಸಿದ್ದು, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತದಾನ ಮಾಡುವುದು ಡೌಟು ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಚುನಾವಣಾ ಅಖಾಡಕ್ಕೆ ಇಳಿದರೆ ಮಾತ್ರ ಚುನಾವಣೆ ನಡೆಯಲಿದೆ, ಆಡಳಿತ ಪಕ್ಷದಲ್ಲಿ ಸ್ವಲ್ಪ ಗೊಂದಲ ಸೃಷ್ಟಿಸುವ ಸಾಧ್ಯತೆಗಳಿವೆ. ಇಲ್ಲದಿದ್ದಲ್ಲಿ ನಾಲ್ವರು ಅಭ್ಯರ್ಥಿಗಳು ಅಂದರೆ ಕಾಂಗ್ರೆಸ್ ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಅವಿರೋಧವಾಗಿ ರಾಜ್ಯ ಸಭೆಗೆ ಆಯ್ಕೆಯಾಗಲಿದ್ದಾರೆ.