ಬೆಂಗಳೂರು : ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಬಾಂಡಗೆ ಮತ್ತು ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಇಂದು ಇಲ್ಲಿ ನಾಮಪತ್ರ ಸಲ್ಲಿಸಿದರು.
ವಿಧಾನಸೌಧದಲ್ಲಿ ಚುನಾವಣಾಧಿಕಾರಿ ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ,ವಿರೋಧ ಪಕ್ಷದ ನಾಯಕ ಆರ್. ಅಶೋಕ್,ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್,ಇಬ್ಬರೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ವಿಜಯೇಂದ್ರ ಅವರು, ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅತ್ಯುತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಸರಕಾರವು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿದೆ.ಹಿಂದೆ ಬಿಜೆಪಿ ಸರಕಾರವು ರಾಜ್ಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 7500 ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು.ಸಿದ್ದರಾಮಯ್ಯನವರ ಸರಕಾರವು 4,500 ಕೋಟಿ ಮೀಸಲಿಟ್ಟು, ಕೃಷಿ ಕ್ಷೇತ್ರಕ್ಕೂ ಮೊತ್ತ ಕಡಿಮೆ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ಷೇಪಿಸಿದರು.

ಕೇಂದ್ರದ ವಿರುದ್ಧ ಹೋರಾಟಕ್ಕೆ ಬೀದಿಗೆ ಇಳಿದಿರುವುದು ಕಾಂಗ್ರೆಸ್ ಷಡ್ಯಂತ್ರ ಎಂದು ಟೀಕಿಸಿದ ಅವರು,ಕೇಂದ್ರದಲ್ಲಿ ಬಿಜೆಪಿ,ಎನ್‍ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ; ಮೋದಿಜೀ ಅವರು ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂಬುದನ್ನು ಸಹಿಸಲಾಗದೆ ಈ ಷಡ್ಯಂತ್ರ ಮಾಡುತ್ತಿದ್ದಾರೆ.ರೈತರ ಬೇಡಿಕೆ ಈಡೇರಿಸುವ ಕಡೆಗೆ ಪ್ರಯತ್ನ ನಡೆದಿದೆ.ಇದರ ನಡುವೆ ಕಾಂಗ್ರೆಸ್ ರಾಜಕೀಯ ಪಿತೂರಿ ಮಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ವಿವರಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರವು 6 ಸಾವಿರ ಕೊಡುತ್ತಿದೆ.ಯಡಿಯೂರಪ್ಪ ಅವರು 4 ಸಾವಿರ ಸೇರಿಸಿ ನೀಡುತ್ತಿದ್ದರು.
ಸಿದ್ದರಾಮಯ್ಯನವರು ಅದನ್ನೂ ನಿಲ್ಲಿಸಿದ್ದಾರೆ.ರೈತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಟೀಕಿಸಿದರು.

ಎರಡೂ ಅಭ್ಯರ್ಥಿಗಳ ಗೆಲುವು: ಅಶೋಕ್ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು,ಇಬ್ಬರೂ ಗೆಲ್ಲುವ ವಿಶ್ವಾಸವಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು. ದೆಹಲಿಯಲ್ಲಿ ರೈತರ ಚಳವಳಿ,ಪ್ರತಿಭಟನೆ ಹಿಂದೆ ಕಾಂಗ್ರೆಸ್ ಟೂಲ್ ಕಿಟ್ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಇಂಡಿಯಾ ಒಕ್ಕೂಟದಲ್ಲಿ ಎಲ್ಲ ಪಕ್ಷಗಳು ಒಂದೊಂದಾಗಿ ಖಾಲಿ ಆಗುತ್ತಿವೆ.ಕೊನೆಗೆ ಐ ಮಾತ್ರ ಉಳಿಯಲಿದೆ ಎಂದ ಅವರು, ಮಮತಾ ಖಾಲಿ,ಒಕ್ಕೂಟ ಹುಟ್ಟು ಹಾಕಿದ ನಿತೀಶ್ ಖಾಲಿ, ಕೇಜ್ರಿವಾಲ್ ಖಾಲಿ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಅಶೋಕ್ ಚೌಹಾಣ್ ಕಾಂಗ್ರೆಸ್ ತೊರೆದಿದ್ದಾರೆ.ಹತಾಶವಾದ ಕಾಂಗ್ರೆಸ್ ಪಕ್ಷವು, ರೈತರನ್ನು ಟೂಲ್ ಕಿಟ್ ಆಗಿ ಬಳಸಿಕೊಂಡಿದೆ.ಇದನ್ನು ಖಂಡಿಸುತ್ತೇವೆ ಎಂದರು.
ರೈತರು ಬೆಂಬಲ ಕೇಳುವ ಮೊದಲೇ ಕಾಂಗ್ರೆಸ್ ಅವರಿಗೆ ತನ್ನ ಬೆಂಬಲ ಘೋಷಿಸಿದೆ. ಇದು ಹತಾಶೆಯ ಸಂಕೇತ ಎಂದು ವಿವರಿಸಿದರು.ಇವರೇ ಇದರ ಸೂತ್ರಧಾರರು ಎಂದರು. ಮೋದಿಯವರು ಪ್ರಧಾನಿಯಾದ ಬಳಿಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ರಸಗೊಬ್ಬರಕ್ಕೆ ಗರಿಷ್ಠ ಸಬ್ಸಿಡಿ ಕೊಡುತ್ತಿರುವುದನ್ನು ಪ್ರಸ್ತಾಪಿಸಿದರು.