ರಾಜ್ ಕೋಟ್ : ಮುಂಬರುವ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಗೆ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಆಗಿದ್ದ ಒಪ್ಪಂದ ಅಂತ್ಯಗೊಂಡಿತ್ತು. ಆ ಬಳಿಕ, ನಡೆಯುತ್ತಿರುವ ಸರಣಿಗಳಿಗೆ ರಾಹುಲ್ ದ್ರಾವಿಡ್ ಮತ್ತು ಇತರ ಸಿಬ್ಬಂದಿಯನ್ನು ಮುಂದುವರೆಸಲಾಗಿತ್ತು. ಎಲ್ಲಿಯವರೆಗೆ ಮುಂದುವರೆಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಿರಲಿಲ್ಲ. ಇದೀಗ ಜಯ್ ಶಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಮುಂಬರುವ ಜೂನ್ ವರೆಗೆ ಅವರು ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ.

ಈ ಸಂಬಂಧ ರಾಹುಲ್ ದ್ರಾವಿಡ್ ಅವರೊಂದಿಗೆ ಪ್ರಾಥಮಿಕ ಮಾತುಕತೆ ಮಾಡಲಾಗಿದೆ. ಅವರ ಜೊತೆ ಮಾತನಾಡಲು ಸಮಯ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಅಂತಹ ಹಿರಿಯ ವ್ಯಕ್ತಿಯ ಒಪ್ಪಂದದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಅವರು ವಿಶ್ವಕಪ್ ವರೆಗೆ ಕೋಚ್ ಆಗಿರಲಿದ್ದಾರೆ ಎಂದಿದ್ದಾರೆ. ಈ ಸಂಬಂಧ ಶೀಘ್ರದಲ್ಲಿಯೇ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.




