ಬೆಂಗಳೂರು : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನಮನ ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಪಕ್ಷ, ಇದೀಗ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಇನ್ನೊಂದೆಡೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ- ಜೆಡಿಎಸ್ ಕೂಡ ತಯಾರಿ ನಡೆಸುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಮೈಸೂರು ಲೋಕಸಭಾ ಚುನಾವಣೆ ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ.
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಮುಖ್ಯಮಂತ್ರಿ ರಣತಂತ್ರ ರೂಪಿಸುತ್ತಿದ್ದಾರೆ. ಅದಕ್ಕೆಂದೇ ಅವರು ಚಿತ್ರ ನಟ ಹಾಗೂ ಯಾವಾಗಲೂ ಬಡವರ ಮಕ್ಕಳು ಬೆಳೀಬೇಕು ಎಂದು ಹೇಳುತ್ತಿರುವ ನಟ ರಾಕ್ಷಸ ಡಾಲಿ ಧನಂಜಯ ಅವರನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ.

ಹಾಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೇ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ, ಇನ್ನೊಂದೆಡೆ ನಟ ರಾಕ್ಷಸನನ್ನ ರಾಜಕೀಯಕ್ಕೆ ಕರೆತರಬೇಕೆಂಬ ಇಚ್ಛೆನೂ ಇದೆ. ಕೊನೆ ಘಳಿಗೆಯಲ್ಲಿ ಯಾರಿಗೆ ಕಾಂಗ್ರೆಸ್ ಟಿಕೇಟ್ ನೀಡುತ್ತೋ, ಗೊತ್ತಿಲ್ಲ, ಆದರೆ, ಡಾಲಿ ಧನಂಜಯ ಅವರನ್ನು ಮಾತ್ರ ಚುನಾವಣಾ ಕಣಕ್ಕೆ ತಂದು ಅವರನ್ನು ಲೋಕಸಭೆಗೆ ಕಳುಹಿಸಬೇಕು ಎನ್ನುವುದು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಳೀಯ ಮಟ್ಟದಲ್ಲಿ ಅಲ್ಪ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರೀ ಜನಮನ್ನಣೆ ಗಳಿಸಿರುವ ಡಾಲಿ ಧನಂಜಯ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಇದಕ್ಕೆ ಡಾಲಿ ಧನಂಜಯ ಅವರು ಒಪ್ಪಿಗೆ ಸೂಚಿಸಿದ್ದಲ್ಲಿ ಮೈಸೂರು- ಕೊಡಗು ಕ್ಷೇತ್ರವಂತೂ ಭಾರೀ ಸದ್ದು ಮಾಡುವುದಂತೂ ಸತ್ಯ.

ಹಾಲಿ ಅನೇಕ ಸಂಸದರು ಪ್ರಧಾನಿ ಮೋದಿಯವರ ವರ್ಚಸ್ಸಿನಲ್ಲಿಯೇ ಗೆದ್ದುಬಂದವರು, ಅವರ ಸ್ವಂತ ವರ್ಚಸ್ಸು ಏನು ಇಲ್ಲ ಎನ್ನುವುದು ಮತದಾರ ಪ್ರಭುವಿನ ಅನಿಸಿಕೆ, ಹಾಗೆಯೇ ರಾಜ್ಯ ಮತ್ತು ಕನ್ನಡಿಗರ ಪರ ಏನೂ ಕೆಲಸ ಮಾಡಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಆದ್ದರಿಂದ ಸದಾ ಬಡವರ ಪರ ಧ್ವನಿ ಎತ್ತುತ್ತಿರುವ ಡಾಲಿ ಧನಂಜಯ ಅವರಿಗೆ ಟಿಕೇಟು ನೀಡಿದರೆ ಜಯಭೇರಿ ಬಾರಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.




