FARMER’S DELHI CHALO PROTEST TEMPORARILY SUSPENDED: ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ರೈತರ ದೆಹಲಿ ಚಲೋ ತಾತ್ಕಾಲಿಕ ಸ್ಥಗಿತ: ಬೇಡಿಕೆ ಈಡೇರದಿದ್ದಲ್ಲಿ ಫೆ.21ಕ್ಕೆ ಮತ್ತೆ ಪುನರಾರಂಭ

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ದೇಶದ ನಾನಾ ರೈತಪರ ಸಂಘಟನೆಗಳು ನಡೆಸುತ್ತಿದ್ದ ದೆಹಲಿ ಚಲೋ ಪ್ರತಿಭಟನೆಯನ್ನು ರೈತರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ನಿನ್ನೆ ತಡರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಕೇಂದ್ರ ಸರ್ಕಾರ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆ ಅಲ್ಪಪ್ರಮಾಣದಲ್ಲಿ ಯಶಸ್ಸು ಕಂಡಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಎರಡು ದಿನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿರುವ ರೈತರು ಬೇಡಿಕೆ ಈಡೇರಿಕೆಯಾಗದಿದ್ದಲ್ಲಿ ಫೆಬ್ರುವರಿ 21 ರಿಂದ ಮತ್ತೆ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರುಗಳು ರೈತರೊಂದಿಗೆ ಸಂಜೆ 8ಗಂಟೆಯಿಂದ ತಡರಾತ್ರಿ 1 ಗಂಟೆಯವರೆಗೂ ಸಭೆ ನಡೆಸಿದ್ದಾರೆ.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಂಬಂಧ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲು ರೈತರ ಸಂಘಟನೆಗಳು ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಎರಡು ದಿನಗಳ ತಾತ್ಕಾಲಿಕ ವಿರಾಮ ನೀಡಲಾಗಿದೆ.
ಎರಡು ದಿನಗಳ ಕಾಲ ಕೃಷಿ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಡೇರ್ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಈಡೇರಿಕೆಗಾಗಿ ಮುಂದಾಗಿದೆ.

More News