ಬೆಂಗಳೂರು : ಅಧ್ಯಕ್ಷರೇ, ಇಷ್ಟು ಒಳ್ಳೆಯ ಊಟ ಕೊಟ್ಟ ಮೇಲೆ, ಹಾಸಿಗೆ, ಅದು ಇದು ಕೊಟ್ರೆ ನಾವು ಸುಖವಾಗಿ ಇರ್ತೇವೆ! ಎಂದು ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಮುಂದೆ ಬೇಡಿಕೆ ಇಟ್ಟರು.
ವಿಧಾನಸಭೆ ಕಾರ್ಯ ಕಲಾಪಗಳಿಗೆ ಶಾಸಕರು ಗೈರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗಿನ ಉಪಹಾರದ ಜೊತೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ ಖಾದರ್ ಸದಸ್ಯರಿಗೆ ತಿಳಿಸಿದರು.
ಬೆಳಗ್ಗೆ ಲಘು ಉಪಹಾರದ ಜೊತೆಗೆ ಮಧ್ಯಾಹ್ಮದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಲ್ಲರೂ ಇಲ್ಲೇ ಊಟ ಮಾಡಿ ಸರಿಯಾದ ಸಮಯಕ್ಕೆ ಸದನಕ್ಕೆ ಬನ್ನಿ ಎಂದು ಮನವಿ ಮಾಡಿದರು.

ಇಲ್ಲಾಂದ್ರೆ ಊಟಕ್ಕೆ ಹೋದವರು ಮತ್ತೆ ಕಾಣುವುದೇ ಇಲ್ಲ. ಹೊರಗೆ ಹೋದರೆ ಅಲ್ವಾ ಬರದೆ ಇರುವುದು. ಹಾಗಾಗಿ ಬೆಂಗಳೂರಿನಲ್ಲಿ ಎಲ್ಲೂ ಸಿಗದ ಬೆಸ್ಟ್ ಊಟದ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ,
ಅಷ್ಟೇಲ್ಲಾ ಊಟ ಕೊಟ್ಟ ಮೇಲೆ ಹಾಸಿಗೆ, ಅದು ಇದು ಕೊಟ್ರೆ ನಿಮ್ಮ ಆಶೀರ್ವಾದದಿಂದ ಸುಖವಾಗಿ ಇರ್ತೇವೆ ಎಂದು ತಮಾಷೆಯಾಗಿ ಕಾಲೆಳೆದರು.

ವಿಧಾನಸಭೆ ಅಧಿವೇಶನವನ್ನು ಈ ಬಾರಿ ಬೆಳಗ್ಗೆ 10.15 ಕ್ಕೆ ಆರಂಭಿಸಲಾಗಿದೆ. ಬೆಳಗ್ಗೆ ಶಾಸಕರು ಸದನಕ್ಕೆ ಬೇಗ ಬರಲು ಅನುಕೂಲ ಆಗುವ ನಿಟ್ಟಿನಲ್ಲಿ ಬೆಳಗ್ಗೆ ಉಪಹಾರದ ವ್ಯವಸ್ಥೆಯನ್ನು ವಿಧಾನಸೌಧದ ಕ್ಯಾಂಟೀನ್ ನಲ್ಲಿ ಮಾಡಲಾಗಿದೆ. ಶಾಸಕರಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತಿದೆ.
ಇದೀಗ ಮಧ್ಯಾಹ್ನದ ಭೋಜನವನ್ನು ಉಚಿತವಾಗಿ ನೀಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಆದರೆ ಸ್ಪೀಕರ್ ಈ ಪ್ರಯತ್ನದಿಂದ ಶಾಸಕರು ಸದನದಲ್ಲಿ ಭಾಗಿಯಾಗುವ ಪ್ರಮಾಣ ಹೆಚ್ಚಾಗುತ್ತಾ ಎಂಬುದು ಕಾದು ನೋಡಬೇಕಿದೆ.