ಬೆಂಗಳೂರು : ರಾಜ್ಯಸಭಾ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು, ಫೆಬ್ರುವರಿ 27ರಂದು ಮತದನಾ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಮೂವರು, ಬಿಜೆಪಿ ಹಾಗೂ ಜೆಡಿಎಸ್ ನ ತಲಾ ಒಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು, ನಾಮಪತ್ರ ವಾಪಸ್ ಪಡೆಯಲು ಮಧ್ಯಾಹ್ನ 3 ಗಂಟೆಯವರೆಗೂ ಸಮಯಾವಕಾಶವಿದೆ. ಬಳಿಕ ಅಧಿಕೃತ ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ.
ಅವಿರೋಧ ಆಯ್ಕೆ ಬದಲಾಗಿ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿ ಕಣದಲ್ಲಿ ಉಳಿಯುವ ಸಾಧ್ಯತೆ. ಫೆ 27 ರಂದು ಮತದಾನ ನಡೆಯಲಿದ್ದು ಕಾಂಗ್ರೆಸ್ ಮೂವರು, ಬಿಜೆಪಿ ಓರ್ವ ಅಭ್ಯರ್ಥಿ ಗೆಲುವಿಗೆ ಅಡ್ಡಿಯಿಲ್ಲ ಆದರೆ, ಐದನೇ ಹಾಗೂ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 8 ಮತಗಳ ಕಡಿಮೆ ಬೀಳಲಿದೆ.
ಬಿಜೆಪಿಯ ಹೆಚ್ಚುವರಿ 20 ಮತಗಳು, ಜೆಡಿಎಸ್ 19 ಮತಗಳು ಸೇರಿ 39 ಮತಗಳಾಗಲಿವೆ. ಗೆಲುವಿಗೆ 45 ಮತಗಳ ಅವಶ್ಯಕತೆ ಇದೆ. ಉಳಿಕೆ ಮತಗಳನ್ನು ಕುದುರೆ ವ್ಯಾಪಾರದ ಮೂಲಕ ಪಡೆಯಲು ಜೆಡಿಎಸ್ ಅಭ್ಯರ್ಥಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ಶಾಸಕರಿಗೆ ಆಮಿಷದ ಮೂಲಕ ಮತಗಳ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರ ಅಡ್ಡ ಮತದಾನದ ತಂತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿತಂತ್ರ ರೂಪಿಸಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಕಾಂಗ್ರೆಸ್ ಶಾಸಕರಿಗೆ ಆಮಿಷ ಹಾಗೂ ಬೆದರಿಸುವ ತಂತ್ರ ಕೈಗೊಂಡಿದ್ದಾರೆ. ಇದು ಫಲಿಸಲ್ಲ ಎಂದು ಡಿಕೆ ಶಿವಕುಮಾರ್ ಈಗಾಗಲೇ ಹೇಳಿದ್ದಾರೆ. ಚುನಾವಣೆ ದಿನ ಇದಕ್ಕೆಲ್ಲಾ ಉತ್ತರ ಸಿಗಲಿದೆ.
ಕುಪೇಂದ್ರ ರೆಡ್ಡಿಯವರನ್ನು ಯಾಲವಾಗಲೂ ಇಂತಹ ಪರಿಸ್ಥಿತಿಯಲ್ಲಿ ಜೆಡಿಎಸ್ ವರಿಷ್ಠರು ಕಣಕ್ಕಿಳಿಸಿ ಅವರಿಗೆ ಮುಜುಗರವನ್ನುಂಟು ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.




