ಚಂಡಿಗಢ: ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಸಾರಸಾಗಟಾಗಿ ತಿರಸ್ಕರಿಸಿದ ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ಮುಖಂಡರು, ನಾಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಇರುವ ಶಿಫಾರಸ್ಸಿನ ಅನುಷ್ಠಾನದ ಹೊರತಾಗಿ ತಾವು ಬೇರೆ ಯಾವುದೇ ಪ್ರಸ್ತಾವವನ್ನು ಒಪ್ಪುವುದಿಲ್ಲ ಎಂದು ರೈತ ಮುಖಂಡರು ಖಡಾಖಂಡಿತವಾಗಿ ಹೇಳಿದ್ದಾರೆ. ಇದರಿಂದ ನಾಳೆಯಿಂದ ಮತ್ತೆ ಪ್ರತಿಭಟನೆ ದೆಹಲಿ ಕಡೆ ಸಾಗಲಿದೆ ಎಂದು ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರವಣ್ ಸಿಂಗ್ ತಿಳಿಸಿದ್ದಾರೆ.
ದ್ವಿದಳ ಧಾನ್ಯಗಳು, ಮೆಕ್ಕೆ ಜೋಳ ಮತ್ತು ಹತ್ತಿಯನ್ನು ಕನಿಷ್ಠ ಪಬೆಂಬಲ ಬೆಲೆ ನೀಡಿ ಸರ್ಕಾರದ ಸಂಸ್ಥೆಗಳ ಮೂಲಕ ಐದು ವರ್ಷಗಳವರೆಗೆ ಖರೀದಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ. ಈ ಖರೀದಿಯು ಸರ್ಕಾರದ ಏಜೆನ್ಸಿಗಳ ಮೂಲಕ ನಡೆಯುತ್ತದೆ ಹಾಗೂ ಖರೀದಿ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂಬ ಪ್ರಸ್ತಾವವನ್ನು ಸರ್ಕಾರ ರೈತರ ಮುಂದಿಟ್ಟಿತ್ತು.
ನಾಳೆ ಬೆಳಗ್ಗೆ 11 ಗಂಟೆಗೆ ನಮ್ಮ ಶಾಂತಿಯುತ ಪ್ರತಿಭಟನೆ ದೆಹಲಿ ಕಡೆಗೆ ತೆರಳುವುದು ಎಂದು ರೈತ ನಾಯಕರು ತಿಳಿಸಿದ್ದಾರೆ. ಒಂದು ವೇಳೆ ದ್ವಿದಳ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸುವ ಖಾತರಿಯನ್ನು ನೀಡಿದ್ದಲ್ಲಿ ಕೇಂದ್ರದ ಮೇಲೆ ಹೆಚ್ಚುವರಿಯಾಗಿ 1.50 ಲಕ್ಷ ಕೋಟಿ ಹೊರೆ ಉಂಟಾಗಲಿದೆ ಎಂದು ಈ ಹಿಂದೆ ನಡೆದ ನಾಲ್ಕನೇ ಸುತ್ತಿನ ಸಭೆಯಲ್ಲಿ ಸಚಿವರು ಹೇಳಿದ್ದನ್ನು ರೈತ ಮುಖಂಡರು ಇಲ್ಲಿ ಸ್ಮರಿಸಿದರು.




