ಲಖನೌ: ಬಿಗ್ ಬಾಸ್ ಮಾಜಿ ಸ್ಪರ್ಧಿ ನೃತ್ಯಗಾರ್ತಿ, ಗಾಯಕಿ ಸಪ್ನಾ ಚೌದರಿ ವಿರುದ್ಧ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ. ಇದರಿಂದ ಸಪ್ನ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಮೂರು ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಆಕೆಗೆ ಲಖನೌ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ. ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸೂಚನೆನೀಡಿದೆ.
2018 ರಲ್ಲಿ ಸಪ್ನಾ ಚೌದರಿ ಸಂಗೀತ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಅದಕ್ಕೆ ಪ್ರೇಕ್ಷಕರಿಂದ ಟಿಕೆಟ್ ಹಣ ವಸೂಲಿ ಮಾಡಲಾಗಿತ್ತು. ಟಿಕೆಟ್ ವೊಂದಕ್ಕೆ 300 ರೂಪಾಯಿನಂತೆ ಸಾವಿರಾರು ಜನರಿಗೆ ಟಿಕೆಟ್ ಮಾರಾಟ ಮಾಡಲಾಗಿತ್ತು.
ಆದರೆ ಸಪ್ನಾ ಈ ಕಾರ್ಯಕ್ರಮಕ್ಕೆ ಆಗಮಿಸಲೇ ಇಲ್ಲ. ಇದರಿಂದಾಗಿ ಕಾರ್ಯಕ್ರಮಕ್ಕೆ ರದ್ದಾಗಿತ್ತು. ಹಾಗೆಯೇ, ಕಾರ್ಯಕ್ರಮದ ಸ್ಥಳದಲ್ಲಿ ಗಲಾಟೆ ನಡೆದಿತ್ತು. ಕಾರ್ಯಕ್ರಮ ರದ್ದಾದ ಬಳಿಕ ಟಿಕೆಟ್ ಖರೀದಿಸಿದ್ದವರಿಗೆ ಟಿಕೆಟ್ ಹಣವನ್ನು ವಾಪಸ್ ಮಾಡದೇ ಇರುವುದರ ಸಂಬಂಧ ಪ್ರಕರಣ ದಾಖಲಾಗಿತ್ತು.

ಕಾರ್ಯಕ್ರಮದ ಆಯೋಜಕಿ ಹಾಗೂ ಗಾಯಕಿ ಎರಡೂ ಆಗಿದ್ದ ಸಪ್ನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸ್ಥಳೀಯರು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಎಷ್ಟೇ ನೊಟೀಸ್ ಕಳಿಸಿದರೂ ಸಪ್ನಾ ಉತ್ತರಿಸಿರಲಿಲ್ಲ ಹಾಗೂ ನ್ಯಾಯಾಲಯದ ನೋಟೀಸ್ ಗೂ ಅವರು ಉತ್ತರ ನೀಡದೇ ಇದ್ದರು.
ನವೆಂಬರ್ 24 ಕ್ಕೆ ಇದೇ ಪ್ರಕರಣದ ವಿಚಾರಣೆ ಇದ್ದು, ಸಪ್ನಾ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಸಪ್ನಾರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯವು ಸೂಚಿಸಿದೆ.

ಈ ಹಿಂದೆ ಸಪ್ನಾ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ ತನ್ನ ವಿರುದ್ಧ ದಾಖಲಾರುವ ಎಫ್‌ಐಆರ್ ಅನ್ನು ರದ್ದು ಮಾಡುವಂತೆ ಹಾಗೂ ಪ್ರಕರಣವನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಸಪ್ನಾ ಅವರ ಅರ್ಜಿ ರದ್ದಾಗಿತ್ತು.




