ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆ ಮೈತ್ರಿ ಸಂಬಂಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಮಂಡ್ಯ ಲೋಕಸಭಾ ಕ್ಷೇತ್ರ ಸೇರಿದಂತೆ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಕುಮಾರಸ್ವಾಮಿ ಅವರು ಬಿಜೆಪಿ ಬಳಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಯಾವ ಕ್ಷೇತ್ರ ಬಿಜೆಪಿ ಬಿಟ್ಟುಕೊಡುತ್ತದೆ ಎನ್ನುವುದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ಪದೇ ಪದೇ ಬಿಜೆಪಿ ಹೈಕಮಾಂಡ್ ಮತ್ತು ಮುಖಂಡರು ಭೇಟಿ ಮಾಡುತ್ತಿದ್ದು, ಪ್ರಮುಖವಾಗಿ ಮಂಡ್ಯ ಕ್ಷೇತ್ರವೇ ಕಗ್ಗಂಟಾಗಿ ಪರಿಣಮಿಸಿದೆ. ಈ ಬಗ್ಗೆ ಚರ್ಚೆ ನಡೆಸಲು ಕುಮಾರಸ್ವಾಮಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಸಂಸದೆ ಸುಮಲತಾ ಅಂಬರೀಷ್ ತಾವು ಮಂಡ್ಯ ಲೋಕಸಭೆಯಿಂದಲೇ ಸ್ಪರ್ಧಿಸುವ ಪಟ್ಟು ಹಿಡಿದಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ಇದು ನುಂಗಲಾರದ ತುತ್ತಾಗಿದೆ. ಇನ್ನು ಮೈತ್ರಿ ಸಂಬಂಧ ಇನ್ನೂ ಅನೇಕ ಬಿಜೆಪಿ ನಾಯಕರು ಭಿನ್ನಾಭಿಪ್ರಾಯ ಹೊಂದಿರುವ ಬಗ್ಗೆನೂ ಕುಮಾರಸ್ವಾಮಿ, ಅಮಿತ್ ಶಾ ಅವರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರ ಹೊಂದಾಣಿಕೆ ಫೈನಲ್ ಆದ್ರೆ ಇಂದೇ ಕುಮಾರಸ್ವಾಮಿ ಅವರು ವಾಪಾಸ್ಸಾಗಲಿದ್ದಾರೆ, ಮೈತ್ರಿ ಮಾತುಕತೆ ನೆಡದ ಬಳಿಕ ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡರ ಬೆಂಬಲಕ್ಕೆ ನಿಂತಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಆದರೆ, ಜೆಡಿಎಸ್ ನ ಹಿರಿಯ ಮುಖಂಡ ಜಿ ಟಿ ದೇವೇಗೌಡರು, ಈ ಮೈತ್ರಿ ಕೇವಲ ಮುಂಬರುವ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಇನ್ನಷ್ಟು ಗೊಂದಲ ಮೂಡಿಸಿದೆ ಎಂದು ತಿಳಿದುಬಂದಿದೆ.




