ಬೆಂಗಳೂರು : ರಾಜ್ಯಸಭೆಗೆ ಮತದಾನ ಇಂದು ನಡೆಯುತ್ತಿದೆ. ನಾನಾ ಪಕ್ಷದ ಶಾಸಕರು ಬಂದು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುತ್ತಿದಾರೆ. ಇದರ ನಡುವೆಯೇ ನಿನ್ನೆ ನಡೆದ ತರಬೇತಿ ಮತಚಲಾವಣೆಯಲ್ಲಿ ಕಾಂಗ್ರೆಸ್ಸಿನ 15 ಶಾಸಕರು ತಪ್ಪು ಮತದಾನ ಚಲಾಯಿಸಿದ್ದಾರೆ, ಇದು ಕಾಂಗ್ರೆಸ್ ನಾಯಕರ ಟೆನ್ಸನ್ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ಆಡಳಿತರೂಢ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಮುಖಂಡರು ನಾನಾ ರೀತಿಯಲ್ಲಿ ಆಮಿಷ, ಬೆದರಿಕೆವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಇನ್ನೊಂದೆಡೆ ಐಟಿ, ಇಡಿಯಿಂದಲೂ ಒತ್ತಡ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದರು.
ಇವೆಲ್ಲದರ ನಡುವೆ ಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ನಿನ್ನೆ ಹೋಟೆಲ್ ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಯಾವ ರೀತಿಯಲ್ಲಿ ಮತದಾನ ಮಾಡಬೇಕು ಎನ್ನುವುದರ ಕುರಿತು ತರಬೇತಿ ನೀಡಲಾಗಿತ್ತು. ತರಬೇತಿ ನಂತರ ನಡೆದ ಮತದಾನದಲ್ಲಿ 15 ಶಾಸಕರು ತಪ್ಪು ಮತದಾನ ಮಾಡಿದ್ದಾರೆ. ಈ ರೀತಿ ತಪ್ಪು ಮತದಾನ ಮಾಡಿದ್ದಲ್ಲಿ ಅವು ಗಣನೆಗೆ ಇರುವುದಿಲ್ಲ.

ಇದು ಕಾಂಗ್ರೆಸ್ ಮುಖಂಡರಿಗೆ ಇನ್ನಷ್ಟು ಟೆನ್ಸನ್ ಜಾಸ್ತಿ ಮಾಡಿದೆ. ಒಂದೆಡೆ ಅಡ್ಡ ಮತದಾನದ ಭೀತಿ ಎದುರಿಸುತ್ತಿದ್ದರೆ, ಇನ್ನೊಂದೆಡೆ ತಪ್ಪು ಮತದಾನ ನಡೆದಾನದಿಂದ ಆತಂಕ ಹೆಚ್ಚಿದೆ. ಆದ್ದರಿಂದ ಈ 15 ಶಾಸಕರಿಗೆ ಮತದಾನ ಮಾಡುವ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಬಂದಿದೆ.
ಎಲ್ಲಾವೂ ಅಂದುಕೊಂಡಂತೆ ನಡೆದರೆ ಕಾಂಗ್ರೆಸ್ ನ ಮೂರು, ಬಿಜೆಪಿ ಒಂದು ಅಭ್ಯರ್ಥಿಗೆ ವಿಜಯ ಮಾಲೆ ಒಲಿಯುವುದರಲ್ಲಿ ಸಂಶಯವಿಲ್ಲ. ಆದರೆ ಅಡ್ಡಮತದಾನ ಅಥವಾ ತಪ್ಪು ಮತದಾನ ನಡೆದರೆ ಮಾತ್ರ ಕಾಂಗ್ರೆಸ್ ಗೆ ಸಂಕಟ ಎದುರಾಗಲಿದೆ.
ಲಕ್ಷಾಂತರ ಓಟುಗಳನ್ನು ಪಡೆದು ಒಂದು ವಿಧಾನಸಭಾ ಕ್ಷೇತ್ರದಿಂದ ಜಯಶಾಲಿಯಾಗಿ ಬರುವ ಶಾಸಕರೇ ತಪ್ಪು ಮತದಾನ ಮಾಡಿದರೆ ಹೇಗೆ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

ಮತದಾನಕ್ಕೆ ಸಕಲ ಸಿದ್ದತೆ
ವಿಧಾನ ಸೌಧದಲ್ಲಿ ರಾಜ್ಯಸಭಾ ಚುನಾವಣೆ ನಡೆಯುವ ಕೊಠಡಿ 106 ರಲ್ಲಿ ಸಕಲ ಸಿದ್ದತೆ ನಡುವೆ ಮತದಾನ ಆರಂಭವಾಗಿದೆ. ಮತದಾನ ನಡೆಯುವ ಕೊಠಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ, ಮತದಾನ ಮಾಡುವ ಮುನ್ನ ಮೊಬೈಲ್ ಮತ್ತು ಪೆನ್ ಗಳನ್ನು ಹೊರಗೆ ಇಟ್ಟು ಹೋಗಲು ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಮತಗಟ್ಟೆ ಅಧಿಕಾರಿ ಕೊಟ್ಟ ನೇರಳೆ ಬಣ್ಣದ ಸ್ಕೆಚ್ ಪೆನ್ ನಿಂದ ಮಾತ್ರ ಮತಪತ್ರದಲ್ಲಿ ಆದ್ಯತೆ ಗುರುತಿಸಬೇಕು, ನೇರಳೆ ಬಣ್ಣದ ಪೆನ್ ಹೊರತು ಪಡಿಸಿ, ಬೇರೆ ಯಾವುದೇ ಪೆನ್ ನಿಂದ ಅಭ್ಯರ್ಥಿ ಗುರುತಿಸಲು ಆದ್ಯತೆ ಇಲ್ಲ ಎಂದು ತಿಳಿಸಲಾಗಿದೆ.

ಮತದಾನ ಕೇಂದ್ರದಲ್ಲಿ ಏಜೆಂಟರ ಉಪಸ್ಥಿತಿ
ಮತದಾನ ಕೇಂದ್ರದಲ್ಲಿ ಮೂರು ಪಕ್ಷದ ಏಜೆಂಟರು ಉಪಸ್ಥಿತರಿದ್ದಾರೆ. ಬಿಜೆಪಿಯ ಇಬ್ಬರು, ಕಾಂಗ್ರೆಸ್ ನ ಇಬ್ಬರು ಏಜೆಂಟರು ಹಾಗೂ ಜೆಡಿಎಸ್ ನ ಓರ್ವ ಏಜೆಂಟರು ಉಪಸ್ಥಿತರಿದ್ದಾರೆ.
ಕಾಂಗ್ರೆಸ್ ನಿಂದ ನಾರಾಯಣಸ್ವಾಮಿ ಹಾಗೂ ಯುಬಿ ವೆಂಕಟೇಶ್, ಬಿಜೆಪಿಯ ಸುನೀಲ್ ಕುಮಾರ್, ಅರುಣ್ ಶಹಾಪೂರ, ಜೆಡಿಎಸ್ ನಿಂದ ತಿಪ್ಪೇಸ್ವಾಮಿ ಏಜೆಂಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.