ಬೆಂಗಳೂರು : ಜೆಡಿಎಸ್ ಶಾಸಕರು ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೋ, ಇಲ್ಲವೋ ಎಂದು ಕಂಡುಹಿಡಿಯಲು ಪಕ್ಷದಿಂದ ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳುವುದರ ಮೂಲಕ ಚುನಾವಣೆಗೆ ಮುನ್ನಾನೇ ಸೋಲು ಒಪ್ಪಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆಯುತ್ತಿರುವ ರಾಜ್ಯ ಸಭೆ ಚುನಾವಣೆಯ ಮತದಾನದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ನಾವು ಚುನಾವಣಾ ಗೆಲ್ಲಬೇಕು ಅನ್ನೋದಕ್ಕಿಂತ, ನಮ್ಮ ಶಾಸಕರು ಒಗ್ಗಟ್ಟು ತೋರಿಸಲು ನಮ್ಮ ಅಭ್ಯರ್ಥಿ ಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಒಂದು ಸಂದೇಶ ಕೊಡಲು ಅಭ್ಯರ್ಥಿ ಹಾಕಿದ್ದೇವೆ. ನಮ್ಮಲ್ಲಿ ಯಾರೂ ಅಸಮಾಧಾನ ಹೊಂದಿಲ್ಲ, ಕೆಲವು ಭಿನ್ನಾಭಿಪ್ರಾಯಗಳು ಇರಬಹುದು ಅಷ್ಟೇ ಆದರೂ ನಾವೆಲ್ಲ ಒಟ್ಟಿಗೆ ಇದ್ದೇವೆ ಎಂದರು.
ಅವರ ಅಭಿವೃದ್ಧಿ ಮಾಡಿಕೊಂಡರು, ಕ್ಷೇತ್ರದ ಅಭಿವೃದ್ದಿಯಾಗಿಲ್ಲ
ಯಾರು ಅಭಿವೃದ್ಧಿ ಪರ ಇರುತ್ತಾರೋ ಅವರಿಗೆ ನಮ್ಮ ಮತ ಎಂದು ಹೇಳಿರುವ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಮೂರು ವರ್ಷಗಳ ಕಾಲ ಬಿಜೆಪಿಯಿಂದ ಮಂತ್ರಿ ಆಗಿದ್ದಾರೆ ಅವರು, ಬಿಜೆಪಿಗೆ ಹೋಗಬೇಕಾದರೆ ಕಾರಣ ಕೊಟ್ಟಿದ್ದರು, ಅಭಿವೃದ್ಧಿ ಆಗ್ತಿಲ್ಲ ಅಂತ ಹೋಗಿದ್ದರು ಎಂದರು.
ಮೂರು ವರ್ಷ ಮಂತ್ರಿ ಆಗಿ ಎಲ್ಲ ಪಡೆದುಕೊಂಡರು, ಅವರು ಮಾತ್ರ ಅಭಿವೃದ್ಧಿ ಮಾಡಿಕೊಂಡರು, ಕ್ಷೇತ್ರದ ಅಭಿವೃದ್ಧಿಯೇನಾಗಿಲ್ಲ ಎಂದು ಖಾರವಾಗಿ ಕುಮಾರಸ್ವಾಮಿ ಪ್ರತಿಕ್ರಯಿಸಿದರು.
ಸ್ಥಳದಿಂದ ಕಾಲು ಕಿತ್ತ ಬೊಮ್ಮಾಯಿ ಹಾಗೂ ಅಶೋಕ್
ಮತದಾನ ನಡೆಸಿ ಬಿಜೆಪಿಯ ಆರ್ ಅಶೋಕ್, ಬಸವರಾಜ ಬೊಮ್ಮಾಯಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಜತೆಯಲ್ಲಿಯೇ ವಿಧಾನಸೌಧದಿಂದ ಹೊರಬಂದರು. ಕುಮಾರಸ್ವಾಮಿ ಅವರು ಎಸ್ ಟಿ ಸೋಮಶೇಖರ್ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಜತೆಯಲ್ಲಿಯೇ ಇದ್ದ ಆರ್ ಅಶೋಕ್ ಮತ್ತು ಬಸವರಾಜ ಬೊಮ್ಮಾಯಿ ಮೆತ್ತನೆ ಸ್ಥಳದಿಂದ ತೆರಳಿದರು. ಈ ರಗಳೆ ತಮಗೆ ಬೇಡವೆಂದು ತೆರಳಿರುವುದು ಗಮನಕ್ಕೆ ಬಂದಿತು.
ಮಾಧ್ಯಮದವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಿಯಾಕ್ಷನ್ ಗಾಗಿ ಕೇಳಿದರೂ ಅಲ್ಲಿ ನಿಲ್ಲದೆ ತೆರಳಿರುವುದು ಮಾತ್ರ ನಾನಾ ಅನುಮಾನಕ್ಕೆ ಕಾರಣವಾಗಿತ್ತು.