ನವದೆಹಲಿ : ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ನಡೆದ ರಾಜ್ಯ ಸಭೆ ಚುನಾವಣೆ ವೇಳೆ ಕಾಂಗ್ರೆಸ್ಸಿನ ಆರು ಶಾಸಕರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಇದರಿಂದ ಆಡಳಿತರೂಢ ಕಾಂಗ್ರೆಸ್ ನಲ್ಲಿ ಇದೀಗ ಬಿಕ್ಕಟ್ಟು ಆರಂಭವಾಗಿದ್ದು, ಇದರ ಶಮನಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಹಿಮಾಚಲ ಪ್ರದೇಶಕ್ಕೆ ತೆರಳುವಂತೆ ಎಐಸಿಸಿ ಸೂಚಿಸಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಆಡಳಿತದ ಬಗ್ಗೆ ಅಸಮಾಧಾನ ಹೊಂದಿರುವ ಆರು ಶಾಸಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಮಾತುಕತೆ ನಡೆಸಿ ಸಂಕಷ್ಟದಲ್ಲಿರುವ ಸರ್ಕಾರವನ್ನು ಸರಿದಾರಿಗೆ ತರಲು ಕಾಂಗ್ರೆಸ್ ನ ಹಿರಿಯ ನಾಯಕರಾದ ಭೂಫಿಂದರ್ ಸಿಂಗ್ ಹೂಡಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಯೋಜಿಸಿ ಕೂಡಲೇ ತೆರಳಲು ಸೂಚಿಸಿದ್ದಾರೆ.
ಇಂದು ಬೆಳಗ್ಗೆನೇ ಡಿ ಕೆ ಶಿವಕುಮಾರ್ ಅವರು ಶಿಮ್ಲಾಕ್ಕೆ ತೆರಳಿದ್ದು, ಸರ್ಕಾರದ ಅಸ್ತಿತ್ವಕ್ಕೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಪರಿಹಾರ ಸೂಚಿಸಲಿದ್ದಾರೆ. ಹಾಗೆಯೇ ಬಿಜೆಪಿಯವರ ಸಂಪರ್ಕದಲ್ಲಿರುವ ಆರು ಕಾಂಗ್ರೆಸ್ ಶಾಸಕರ ಮನವೊಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಆರು ಶಾಸಕರನ್ನು ತಮ್ಮತ್ತ ಸೆಳೆದಿರುವ ಬಿಜೆಪಿ ಇಂದು ಸರ್ಕಾರದ ವಿಶ್ವಾಸ ಮತ ಸಾಭೀತಿಗೆ ಒತ್ತಾಯಿಸಲಿದೆ ಎಂದು ತಿಳಿದುಬಂದಿದೆ. ಆಡಳಿತರೂಢ ಅನ್ಯಪಕ್ಷಗಳ ಅಸ್ತಿತ್ವವನ್ನು ತೆಗೆದಹಾಕುವ ಪ್ರಯತ್ನ ಬಿಜೆಪಿ ಮುಂದುವರೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯಸಭೆಗೆ ನಡೆದ ಏಕೈಕ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಅತೃಪ್ತ ಶಾಸಕರ ಅಡ್ಡಮತದಾನದಿಂದ ಬಿಜೆಪಿಯ ಹರ್ಷ ಮಹಾಜನ್ ಜಯಗಳಿಸಿದ್ದಾರೆ. ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಸೋತಿದ್ದಾರೆ.
ಇಬ್ಬರು ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದಿದ್ದರು. ನಂತರ ಲಾಟರಿ ಎತ್ತುವ ಮೂಲಕ ವಿಜೇತರನ್ನು ಘೋಷಿಸಲಾಯಿತು. ಇದರಲ್ಲಿ ಬಿಜೆಪಿ ಗೆದ್ದಿದೆ. ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ ಒತ್ತು 68ಸದಸ್ಯ ಬಲವನ್ನು ಹೊಂದಿದ್ದು,. ಇದರಲ್ಲಿ ಕಾಂಗ್ರೆಸ್ 40 ಮತ್ತು ಬಿಜೆಪಿ 25 ಹಾಗೆಯೇ ಪಕ್ಷೇತರರು 3 ಸ್ಥಾನಗಳನ್ನು ಹೊಂದಿದೆ.




