ಬೆಂಗಳೂರು : ಕಾಂತರಾಜು ಮನೆಯಲ್ಲಿ ಕೂತು ವರದಿ ಬರೆದಿದ್ದು, ಸರ್ವೆ ಮಾಡಲು ಸರಿಯಾಗಿ ಮನೆಗಳಿಗೆ ಭೇಟಿ ನೀಡಿರಲಿಲ್ಲ, ಆದ್ದರಿಂದ ಜಾತಿಗಣತಿ ವರದಿಯನ್ನು ಸರ್ಕಾರ ಅಂಗೀಕಾರ ಮಾಡಬಾರದು ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿನ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏನು ಮಾಡುತ್ತೆ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ, ನಾವು ಸುಮ್ಮನೆ ಕೂರುವುದಿಲ್ಲ, ವೀರಶೈವ ಉಪ ಜಾತಿಗಳು ಸೇರಿ 2 ಕೋಟಿ ಮೇಲೆ ಬರ್ತೇವೆ, ಇದು 9 ವರ್ಷಗಳ ಹಳೆಯ ವರದಿ, ಅದು ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ತಂದು ಕೊಟ್ಟಿದ್ದಾರೆ ಎಂದು ವರದಿಯನ್ನು ಟೀಕಿಸಿದರು.
ನಾನು ಸರ್ವೇ ಮಾಡಲು ಶುರು ಮಾಡಿಲ್ಲ, ಸಮುದಾಯದಿಂದಲೇ ಪ್ರತ್ಯೇಕ ಸರ್ವೆ ಮಾಡುವ ಆಲೋಚನೆ ಇದೆ, ನಾವು 2 ಕೋಟಿಗೆ ಕಡಿಮೆ ಇಲ್ಲ ಎಂದು ತಿಳಿಸಿದ ಅವರು, ಜಾತಿ ಗಣತಿಯಿಂದ ಜಾತಿ- ಜಾತಿಗಳ ನಡುವೆ ಸಂಘರ್ಷ ಆಗುತ್ತದೆ, ಇದಕ್ಕಾಗಿ ಕೆಲವರು ಚೂ ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಜಾತಿ ಗಣತಿ ವರದಿ ಮುಂದಿನ ಸಂಪುಟ ಸಭೆಯಲ್ಲಿ ಬರಲೇ ಬೇಕಲ್ಲ? ಎಂದು ಹೇಳಿದ ಅವರು, ವರದಿಯಲ್ಲಿ ಉದ್ದೇಶಪೂರ್ವಕವಾಗಿ ವೀರಶೈವರನ್ನು ಕಡಿಮೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದನ್ನೆಲ್ಲ ನೋಡಿದ್ರೆ ಹಾಗೆ ಅನಿಸುತ್ತಿದೆ, ಅವಶ್ಯಕತೆ ಬಿದ್ರೆ ವೀರಶೈವ ಮಹಾಸಭಾದಿಂದ ಜನಗಣತಿ ಮಾಡಿಸುತ್ತೇವೆ ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ಬಗ್ಗೆ ಈಗ ಹೇಳಲ್ಲ ಎಂದು ಹೇಳಿದ ಅವರು, ಈ ಹಿಂದೆ ಲಿಂಗಾಯತ ವಿಚಾರದಲ್ಲಿ ಹಿನ್ನಡೆಯಾಗಿತ್ತು, ವರದಿ ಸ್ವೀಕಾರ ಮಾಡಿದ್ದು ತಪ್ಪಲ್ಲ, ಆದ್ರೆ ಅಂಗೀಕಾರ ಮಾಡಬಾರದು ಎಂದು ಶಾಮನೂರು ಶಿವಶಂಕರಪ್ಪ ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮಾತಿಗೆಲ್ಲಾ ಎಲ್ಲಿ ಮನ್ನಣೆ ಕೊಡ್ತಾರೆ? ಎಂದು ಪ್ರಶ್ನಿಸಿದ ಅವರು, ವರದಿ ಕೊಟ್ಟಿದನ್ನ ಸರ್ಕಾರ ತೆಗೆದುಕೊಂಡಿದ್ದಾರೆ, ಮುಂದೆ ನೋಡೋಣ ಎಂದರು.