CCB WILL HANDLE RAMESHWARAM CAFE BLAST: ಆರೋಪಿಯ ಪತ್ತೆಗೆ ಸಿಸಿಬಿ ಪೊಲೀಸರ ಬಲೆ: ಗೃಹ ಸಚಿವ ಪರಮೇಶ್ವರ

ಬೆಂಗಳೂರು (ಮಾ.1):- ಆರೋಪಿಯ ಪತ್ತೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದು, ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಐಟಿಬಿಪಿಎಲ್ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಬಳಿ ದಿ ರಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಬ್ರೂಕ್‌ಫೀಲ್ಡ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ಆರೋಪಿತರನ್ನು ಬಂಧಿಸಲಾಗುವುದು. ಬ್ರೂಕ್‌ಫೀಲ್ಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರಿಗೆ ಕಿವಿ, ಕೈ ಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ರೀತಿಯ ಆತಂಕ‌ಪಡುವ ಅಗತ್ಯವಿಲ್ಲ.‌ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಿಸಿಬಿ ಪೊಲೀಸರ ವಿವಿಧ ತಂಡಗಳನ್ನು ರಚಿಸಲಾಗಿದ್ದು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೃತ್ಯ ಎಸಗಿದ ವ್ಯಕ್ತಿ ಬಂದು ಹೋಗಿರುವ ಸ್ಥಳಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸುತ್ತಿದ್ದಾರೆ. ಬಸ್ಸಲ್ಲಿ ಬಂದು ಹೋಗಿರುವ ಮಾಹಿತಿ ಇದೆ. ಬಿಎಂಟಿಸಿ ಬಸ್‌ಗಳಲ್ಲಿ ಕ್ಯಾಮೆರಾ ಅಳವಡಿಸಿರುವುದರಿಂದ ಅವುಗಳನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದವರು ನಮ್ಮ ಜೊತೆ ಸಹಕರಿಸಬೇಕು. ಅನಗತ್ಯ ರಾಜಕೀಯ ಮಾಡುವುದಿದ್ದರೆ ಅವರು ಮಾಡಲಿ. ಆದರೆ, ಇಂತಹ ಸಂದರ್ಭದಲ್ಲಿ ಅವರು ನಮಗೆ ಸಹಕರಿಸದರೆ ಒಳ್ಳೆಯದು ಎಂದರು.

More News