ಧಾರವಾಡ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ (ಐಐಟಿ ಧಾರವಾಡ)ದ ಕ್ಯಾಂಪಸ್ನಲ್ಲಿ ನಿರ್ಮಾಣವಾದ ಹೊಸ ಕೇಂದ್ರೀಯ ಕಲಿಕಾ ರಂಗಮಂದಿರ (ಸೆಂಟ್ರಲ್ ಲನಿರ್ಂಗ್ ಥಿಯೇಟರ್-ಸಿಎಲ್ಟಿ), ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ (ಕೆಆರ್ಡಿಸಿ) ಮತ್ತು ಎರಡು ಹೊಸ ಪ್ರವೇಶ ದ್ವಾರಗಳ ಉದ್ಘಾಟನೆಯನ್ನು ಶುಕ್ರವಾರ (ಮಾರ್ಚ್ 1, 2024)ದಂದು ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಉದ್ಘಾಟಿಸಿದರು. ನಂತರ ಅವರು ಅಲ್ಲಿ ನೆರೆದಿದ್ದ ಸಂಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯನ್ನುದ್ದೇಶಿಸಿ ಪ್ರಧಾನ ಭಾಷಣ ಮಾಡಿದರು.
ಉಪ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಐಐಟಿ ಧಾರವಾಡದ ಹಳೆಯ ವಿದ್ಯಾರ್ಥಿಗಳು ಸಂಸ್ಥೆಗೆ ಕೊಡುಗೆ ನೀಡಿ ಸಂಸ್ಥೆಯನ್ನು ಶ್ರೀಮಂತಗೊಳಿಸಬೇಕು ಎಂದು ಹೇಳಿದರು. ಸಂಸ್ಥೆಯ ಬೆಳವಣಿಗೆಗೆ ನೆರವು ನೀಡಲು ಭಾರತೀಯ ಕೌನ್ಸಿಲ್ ಆಫ್ ವಲ್ರ್ಡ್ ಅಫೇರ್ಸ್ ಮತ್ತು ಐಐಟಿ ಧಾರವಾಡ ನಡುವೆ ಎಂಓಯು ಸಾಧ್ಯವಾಗಿಸಲು ನಾವು ಅನುಕೂಲ ಮಾಡಿಕೊಡುತ್ತೇವೆ ಎಂದು ಅವರು ಹೇಳಿದರು. ಅದು ಅಪಾರ ಸಾಧ್ಯತೆಗಳನ್ನು ಉಂಟು ಮಾಡಲಿದೆ.
ಗೌರವಾನ್ವಿತ ಉಪರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ ಎಂದು ಹೇಳಿದರು. ಮಾತು ಮುಂದುವರಿಸುತ್ತಾ ಅವರು. ಭಾರತವು ತನ್ನ ಗುರಿಗಳನ್ನು ಸಾಧಿಸಲು ಮತ್ತು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಶ್ರೇಣಿಗೆ ಸೇರುವಂತೆ ಮಾಡಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.
ಉಪರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಬಳಸಿಕೊಂಡು ಅವರ ಕನಸುಗಳನ್ನು ನನಸು ಮಾಡಲು ಮತ್ತು ಗುರಿಯನ್ನು ಮುಟ್ಟಲು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, ಐಐಟಿ ಧಾರವಾಡದ ನಿರ್ದೇಶಕ ಆರ್ ದೇಸಾಯಿ ಅವರು ಮಾತನಾಡಿ, “ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ನಮ್ಮ ಕ್ಯಾಂಪಸ್ನಲ್ಲಿ ಈ ಮಹತ್ವದ ಕಟ್ಟಡಗಳು ಮತ್ತು ಸೌಲಭ್ಯಗಳನ್ನು ಉದ್ಘಾಟಿಸಿದ್ದು ಐಐಟಿ ಧಾರವಾಡಕ್ಕೆ ಹೆಮ್ಮೆಯ ಕ್ಷಣವಾಗಿದೆ. ಐಐಟಿ ಧಾರವಾಡದಲ್ಲಿ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಈ ಪ್ರದೇಶವನ್ನು ಸುಸ್ಥಿರ ಅಕ್ಷಯ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಸಿಎಲ್ಟಿಯು 19,135 ಚ.ಮೀ.ನಷ್ಟು ವಿಸ್ತೀರ್ಣ ಹೊಂದಿರುವ ಅಪ್ರತಿಮ ಕಟ್ಟಡವಾಗಿದ್ದು, 30 ರಿಂದ 600 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಬಹು ಉಪನ್ಯಾಸ ಹಾಲ್ ಗಳು ಮತ್ತು ಸಭಾಂಗಣಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಕಟ್ಟಡವು ಎಲ್ಲಾ ಸಭಾಂಗಣಗಳಿಗೆ ಪ್ರವೇಶ ಒದಗಿಸುವ ವಿಶಿಷ್ಟವಾದ ರಾಂಪ್ ವಿನ್ಯಾಸವನ್ನು ಹೊಂದಿದೆ ಮತ್ತು 60 ಮೀ ಅಗಲದ ಅದ್ಭುತವಾದ ಮೆಂಬರೇನ್ ಫ್ಯಾಬ್ರಿಕ್ ಗುಮ್ಮಟವನ್ನು ಹೊಂದಿದೆ. ಇದೆಲ್ಲವೂ ಈ ಕಟ್ಟಡಕ್ಕೆ ಅಪೂರ್ವ ವಾಸ್ತುಶಿಲ್ಪ ರಚನೆ ಎಂಬ ಹೆಗ್ಗಳಿಕೆ ಒದಗಿಸಿದೆ.
ತಮ್ಮ ಭಾಷಣದಲ್ಲಿ ಗೌರವಾನ್ವಿತ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಷ್ಟ್ರ ನಿರ್ಮಾಣದಲ್ಲಿ ಐಐಟಿಗಳಂತಹ ಶ್ರೇಷ್ಠ ಸಂಸ್ಥೆಗಳ ಪಾತ್ರದ ಬಗ್ಗೆ ಮಾತನಾಡಿದರು. “ದೇಶದ ಯುವಕರು ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಧಾರವಾಡದ ಐಐಟಿಯಲ್ಲಿರುವ ಪ್ರತಿಭೆಗಳಿಂದಾಗಿ ಈ ಕಿರಿಯ ಐಐಟಿಯಲ್ಲಿನ ವಿದ್ಯಾರ್ಥಿಗಳು ಗಣನೀಯ ನೆರವು ಪಡೆಯುತ್ತಾರೆ. ಈ ಶ್ರೇಷ್ಠ ಕಲಿಕಾ ಕೇಂದ್ರವು ಬೆಳವಣಿಗೆ ಹೊಂದುವ ಮತ್ತು ಮುಂದಿನ ಹಂತಕ್ಕೆ ಹೋಗಲು ಬೇಕಾದ ಸಾಕಷ್ಟು ಸಾಮಥ್ರ್ಯವನ್ನು ಹೊಂದಿದೆ” ಎಂದು ಅವರು ಹೇಳಿದರು.
ಸಚಿವರಾದ ಪ್ರಲ್ಹಾದ ಜೋಶಿಯವರು ತಮ್ಮ ಭಾಷಣದಲ್ಲಿ ಧಾರವಾಡ ಜಿಲ್ಲೆಯು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದರು. “ಧಾರವಾಡವು ಐಐಟಿ ಮತ್ತು ಐಐಐಟಿ ಉಪಸ್ಥಿತಿಯೊಂದಿಗೆ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿದೆ. ಇದು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿ ಕೇಂದ್ರಗಳಲ್ಲಿ ಸೇರಿಕೊಂಡಿವೆ” ಎಂದು ಅವರು ಹೇಳಿದರು.




