RAMESHWARAM CAFE BLAST CASE: ಸಿಎಂ, ಡಿಸಿಎಂ, ಗೃಹ ಇಲಾಖೆಯ ಮಾಹಿತಿಯೇ ಅಧಿಕೃತ:‌ ಡಾ.‌ ಜಿ.ಪರಮೇಶ್ವರ

ಬೆಂಗಳೂರು (ಮಾ.3):-‌ ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟದ ರೀತಿಯಲ್ಲಿಯೇ ಈ ಪ್ರಕರಣದಲ್ಲಿಯೂ ಸ್ಪೋಟದ ವಸ್ತುಗಳನ್ನು ಜೋಡಿಸಿರುವ ತಾಂತ್ರಿಕ ಸಾಮ್ಯತೆ ಕಂಡು ಬರುತ್ತಿದೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬ್ಯಾಟರಿ ಬಳಕೆ, ಟೈಮರ್ ಇನ್ನಿತರ ಗಮನಿಸಿದರೆ ತಾಂತ್ರಿಕವಾಗಿ ಅದೇರೀತಿ ಜೋಡಿಸಿದ್ದಾರೆ. ಒಂದೇ ತರ ಕಾಣಿಸುತ್ತಿದೆ. ಇಂತಹದ್ದೇ ಸಂಘಟನೆಯವರು ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಊಹಾಪೋಹಾ ಹೇಳಿಕೆ ನೀಡುತ್ತಿದ್ದಾರೆ. ನಾನು ಎಲ್ಲರಿಗೂ ವಿನಂತಿ ಮಾಡುತ್ತೇನೆ. ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು, ನಾನು ಅಥವಾ ಗೃಹ ಇಲಾಖೆಯ ಅಧಿಕಾರಿಗಳು ಹೇಳಿದರೆ ಮಾತ್ರ ಅಧಿಕೃತ ಮಾಹಿತಿ ಅಂತ ಪರಿಗಣಿಸಬೇಕು. ಬಹಳ ಜನ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ಇಲ್ಲದೆ ಹೇಳಿಕೆ ನೀಡುತ್ತಿರುವುದರಿಂದ ಗೊಂದಲವಾಗುತ್ತಿದೆ. ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನೀವೆಲ್ಲ ಹೋಗಿ ಕೇಳಿದಾಗ ಹೇಳಿರುತ್ತಾರೆ. ಅದು ಅಧಿಕೃತ ಅಂತ ಅನ್ನೀಸುವುದಿಲ್ಲ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಹೇಳಿಕೆ ನೀಡುವಾಗ ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ ಎಂದರು.

ಸ್ಪೋಟದ ತೀವ್ರತೆ ಬಹಳ ಕಡಿಮೆ ಇರುವುದು ಪರೀಶೀಲನೆಯಲ್ಲಿ ಕಂಡು ಬಂದಿದೆ. ಹೀಗಾಗಿ‌ ದೊಡ್ಡ ಅನಾಹುತ ಆಗಿಲ್ಲ. ಬಳಕೆಯಾದ ಸ್ಪೋಟಕ ವಸ್ತುಗಳು ಕಡಿಮೆ ಇರಬಹುದು. ಹೆಚ್ಚು ಬಳಕೆ ಮಾಡಿದ್ದರೆ ಸ್ಪೋಟದ ತೀವ್ರತೆ ಜಾಸ್ತಿ ಆಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನೆಟ್‌ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಸೈಡಿಗೆ ಸಿಡಿದಿದ್ದರೆ ಬಹಳ‌ ಜನರಿಗೆ ಪ್ರಾಣಾಪಾಯ ಆಗುತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ ಎಂದು ತಿಳಿಸಿದರು.

ಎನ್‌‌ಐಎ ಮತ್ತು ಎನ್‌ಎಸ್‌ಜಿ ಅಧಿಕಾರಿಗಳು ಬಂದು ತನಿಖೆ ಮಾಡುತ್ತಿದ್ದಾರೆ. ಸ್ಪೋಟದ ರೀತಿಯನ್ನು ಗಮನಿಸಿರುವ ಎನ್‌ಐಎ ಅಧಿಕಾರಿಗಳಿಗೆ, ಯಾವ ಸಂಘಟನೆಯವರು ಮಾಡಿರಬಹುದು ಎಂಬ ಅಂದಾಜು ಇರುತ್ತದೆ. ಶೀಘ್ರದಲ್ಲಿ ಆರೋಪಿಗಳನ್ನು ಹಿಡಿಯುತ್ತೇವೆ ಎಂದರು.

26 ಬಸ್‌ಗಳಲ್ಲಿನ ಕ್ಯಾಮೆರಾ ಪರಿಶೀಲನೆ:- ಬೆಂಗಳೂರು ನಗರವನ್ನು ಸೇಫ್ ಸಿಟಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ‌ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಸೇಫ್ ಸಿಟಿ ಮಾಡಿ ಬಹಳ ಹಣ ಖರ್ಚು ಮಾಡಿ, ಕ್ಯಾಮರಾ ಹಾಕಿದ್ದೇವೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನು ಮಾನಿಟರ್ ಮಾಡ್ತಿದ್ದೇವೆ. ಬೆಂಗಳೂರು ಈಗ ಸುರಕ್ಷತೆಯಲ್ಲಿ ಎಷ್ಟೋ ಉತ್ತಮವಾಗಿದೆ. ಸ್ಥಳದ ಸುತ್ತ ಮುತ್ತಲಿನ 40ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸ್ಪೋಟದ ಸಂದರ್ಭದಲ್ಲಿ 26 ಬಸ್‌ಗಳು ಸಂಚರಿಸಿವೆ. 26 ಬಸ್‌ಗಳಲ್ಲಿನ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ತಾಂತ್ರಿಕ ವಿಚಾರಗಳ ಬಗ್ಗೆ ಹೇಳುವುದಿಲ್ಲ ಎಂದು ತಿಳಿಸಿದರು.

ರಕ್ಷಣೆ‌ ಮಾಡುವ ಪ್ರಸಂಗವಿಲ್ಲ:-
ವಿಧಾನಸೌಧ ಆವರಣದಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಅವರು, ಎಫ್‌ಎಸ್‌ಎಲ್‌ನವರು ತಾಂತ್ರಿಕ ವರದಿ ನೀಡಬೇಕು. ಒಂದರೆಡು ದಿನದಲ್ಲಿ ವರದಿ ಕೊಡೋದಿಕ್ಕೆ ಆಗಲ್ಲ. ನಾನು ಯಾವತ್ತು 48 ಗಂಟೆಯಲ್ಲಿ ಎಫ್‌ಎಸ್‌ಎಲ್ ವರದಿ ಬರುತ್ತದೆ ಎಂದು ಹೇಳಿಲ್ಲ. ಸಾಕಷ್ಟು ವಿಡಿಯೋಗಳಿರುತ್ತವೆ. ಅದೆಲ್ಲವನ್ನು ಪರಿಶೀಲಿಸಬೇಕು. ಈ ಪ್ರಕರಣಕ್ಕೆ ಹೆಚ್ಚು ಒತ್ತು ನೀಡುವಂತೆ ಘಟನೆ ನಡೆದ ದಿನವೆ ಸೂಚನೆ ನೀಡಿದ್ದೇನೆತ್ತಿ. ವರದಿ ಬಂದ ತಕ್ಷಣ ಮುಂದಿನ ಕ್ರಮ ಜರುಗಿಸಲಾಗುವುದು. ಯಾರನ್ನು ರಕ್ಷಣೆ ಮಾಡುವ ಪ್ರಸಂಗವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಫ್‌ಎಸ್‌ಎಲ್ ವರದಿ ಮುಚ್ಚಿಡುವ ಪ್ರಶ್ನೆಯೇ ಬರುವುದಿಲ್ಲ.‌ ಬಿಜೆಪಿಯರು ಅವರ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ನಾನು ಹೇಳಿದರೆ ಸುಮ್ಮನೆ ರಾಜಕೀಯ ಆಗುತ್ತೆ. ಮಂಗಳೂರಲ್ಲಿ ಕೂಕ್ಕರ್ ಬ್ಲಾಸ್ಟ್ ಆಯ್ತು ಅವಾಗ ಯಾರು ಅಧಿಕಾರದಲ್ಲಿದ್ದರು? 2008ರಲ್ಲಿ ಸರಣಿ ಸ್ಪೋಟ ಆಯ್ತು ಅವಾಗ ಯಾರು ಇದ್ದರು. ಹೇಳಬೇಕು ಅಂದ್ರೆ ನಾವು ಹೇಳ್ತೀವಿ ಆದ್ರೆ ಅವಶ್ಯಕತೆ ನನಗೆ ಇಲ್ಲ. ಇದು ಬೆಂಗಳೂರು ಮತ್ತು ಕರ್ನಾಟಕದ ಪ್ರಶ್ನೆ. ಇದರಲ್ಲಿ ರಾಜಕೀಯ ಬೇಡ ಎಂದು ಹೇಳಿದರು

ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ:-
ರಾಮ ಮಂದಿರ ಉದ್ಘಾಟನೆ ಬಳಿಕ ರಾಮ ಅನ್ನೋ ಹೆಸರು ಟಾರ್ಗೆಟ್ ಆಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಪದೇ ಪದೇ ಹೇಳುತ್ತಿದ್ದೇವೆ. ಶ್ರೀರಾಮ ಎಲ್ಲರಿಗೂ ಶ್ರೀರಾಮ. ಬಿಜೆಪಿ‌ ಅವರು ಎಲ್ಲಾದರೂ ಖರೀದಿಸಿದ್ದಾರೆಯೇ. ಅದಕ್ಕೆ ಎಷ್ಟು ಹಣ ಆಯ್ತೋ ನಮಗೆ ಗೊತ್ತಿಲ್ಲ. ಬಿಜೆಪಿ ಅವರಿಗೆ ದುಡ್ಡು ಕೊಟ್ಟು ಕೊಂಡುಕೊಳ್ಳೋ ಅಭ್ಯಾಸ ಇದೆ. ಹೀಗಾಗಿ ಶ್ರೀರಾಮನನ್ನ ಕೊಂಡು ಕೊಂಡಿದ್ದರೆಯೇ ನನಗೆ ಗೊತ್ತಿಲ್ಲ. ನಾನು ಸಣ್ಣವನಿದ್ದಾಗ ಶ್ರೀರಾಮ ನವಮಿ ದಿನ ಪಾನಕ, ಕೋಸಂಬರಿ, ಮಜ್ಜಿಗೆ ಹಂಚಿದ್ದೇನೆ. ನಮಗೆ ಅಂತಹ ರಾಮ ಬೇಕು. ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ.‌ ಈ ದೇಶದ ಸಂಸ್ಕೃತಿ, ಪರಂಪರೆಯ ಆಸ್ತಿ ಎಂದು ಹೇಳಿದರು.

More News