ಬೆಂಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕ ರಾಜ್ಯವನ್ನು ಹೊರತುಪಡಿಸಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ಮುಖಂಡರು ಸಭೆ ಸೇರಿ ಟಿಕೆಟ್ ಆಕಾಂಕ್ಷಿತರ ಫೈನಲ್ ಲೀಸ್ಟ್ ಅನ್ನು ಸಿದ್ದಪಡಿಸಿದ್ದು, ಇಂದು ಬೆಳಗಾವಿಗೆ ಆಗಮಿಸುವ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನೀಡಲು ಮುಂದಾಗಿದೆ.
ಚುನಾವಣಾ ನಿರ್ವಹಣಾ ಸಮಿತಿ ಸಭೆ ಸೇರಿ ಸಂಭಾವ್ಯ ಎಲ್ಲಾ ಆಕಾಂಕ್ಷಿತರ ಪಟ್ಟಿಯನ್ನು ಸಿದ್ದಪಡಿಸಿದ್ದು, ಸುಮಾರು 26 ಲೋಕಸಭಾ ಕ್ಷೇತ್ರಗಳ ಪಟ್ಟಿಯನ್ನು ಸಿದ್ದಪಡಿಸಿದೆ, ಆದರೆ. ಈ ಸಭೆಗೆ ಮಂಚೂಣಿ ನಾಯಕ ಎಂದೇ ಬಿಂಬಿತವಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೈರು ಹಾಜರಿ, ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸತತ ಮೂರು ಗಂಟೆಗೂ ಅಧಿಕ ಸಮಯ ಕೋರ್ ಕಮಿಟಿ ಸಭೆ ನಡೆದಿದ್ದು, ಜೆಡಿಎಸ್ ಗೆ ಬಿಟ್ಟು ಕೊಡಬಹುದಾದ ಕ್ಷೇತ್ರ ಹೊರತುಪಡಿಸಿ ಲೀಸ್ಟ್ ತಯಾರಿಸಿದೆ. ಮಂಡ್ಯ ಹಾಗೂ ಹಾಸನ ಕ್ಷೇತ್ರ ಹೊರತುಪಡಿಸಿದ ಉಳಿದ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುವ ಪಟ್ಟಿ ಸಿದ್ದಪಡಿಸಲಾಗಿದೆ.

ಪ್ರತಿ ಕ್ಷೇತ್ರಕ್ಕೂ ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದ್ದು, ಪಟ್ಟಿಯಲ್ಲಿ ಹಾಲಿ ಸಂಸದರಿದ್ದರೂ ಒಂದಕ್ಕಿಂತ ಹೆಚ್ಚು ಹೆಸರು ಪಟ್ಟಿಯಲ್ಲಿವೆ ಎಂದು ತಿಳಿದುಬಂದಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ, ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಸೇರಿದ್ದೆವು, ಎರಡು ಮೂರು ದಿನಗಳಿಂದ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಇಬ್ಬರು ವೀಕ್ಷಕರನ್ನು ಕಳಿಸಿದ್ದೆವು, ವೀಕ್ಷಕರಿಂದ ಬಂದಿದ್ದಂತಹ ಹೆಸರುಗಳನ್ನು ಸಭೆಯ ಮುಂದೆ ಇಟ್ಟು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಚರ್ಚಿಸಿದ ಹೆಸರುಗಳನ್ನು ವರಿಷ್ಠರಿಗೆ ಕಳಿಸಲು ತೀರ್ಮಾನಿಸಲಾಗಿದೆ, ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ, ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಲಿದೆ ಎಂದರು. ಅಕಾಂಕ್ಷಿಗಳ ಹೆಸರುಗಳನ್ನು ಕಳುಹಿಸುವುದು ನಮ್ಮ ಕರ್ತವ್ಯ, ಯಾವ್ಯಾವ ಹೆಸರುಗಳು ಚರ್ಚೆ ಯಾಗಿದೆಯೋ ಎಲ್ಲವನ್ನೂ ಕಳುಹಿಸುತ್ತೇವೆ ಎಂದರು.