ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಜಾರಿ ನಿರ್ದೇಶನಾಲಯ (ಇ.ಡಿ) ಮುಂದೆ ಹಾಜರಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಪ್ಪಿಕೊಂಡಿದ್ದಾರೆ.
ಇ.ಡಿ. ಸಂಸ್ಥೆಯು ಕಳೆದ ನವೆಂಬರ್ ನಿಂದ ಇದುವರೆಗೂ ಏಳು ಬಾರಿ ಸಮನ್ಸ್ ಜಾರಿ ಮಾಡಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕೋರಿತ್ತು. ಆದರೆ, ಕೇಜ್ರಿವಾಲ್ ಇದುವರೆಗೂ ಒಮ್ಮೆಯೂ ಹಾಜರಾಗಿರಲಿಲ್ಲ.
ತಮಗೆ ಜಾರಿ ಮಾಡಿರುವ ಸಮನ್ಸ್ ಅನ್ನು ಹಿಂಪಡೆಯುವಂತೆಯೂ ಅವರು ಇ.ಡಿ ಸಂಸ್ಥೆಗೆ ಪತ್ರವನ್ನು ಬರೆದಿದ್ದರು. ಆದರೆ, ಇದೀಗ ತಾವು ವಿಚಾರಣೆಗೆ ಹಾಜರಾಗಲು ಸಿದ್ದ ಎಂದು ಅವರು ಹೇಳಿದ್ದಾರೆ.
ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಮಾರ್ಚ್ 12ರ ಬಳಿಕ ವಿಚಾರಣೆಯ ದಿನಾಂಕವನ್ನು ನಿಗಧಿಗೊಳಿಸುವಂತೆ ಅವರು ಕೋರಿದ್ದಾರೆ. ಇದರಿಂದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತೊಂದು ಮಜಲು ಪಡೆದುಕೊಂಡಿದೆ. ಇದೀಗ ಎಲ್ಲರ ದೃಷ್ಟಿ ಇ.ಡಿ ಸಂಸ್ಥೆಯ ಮೇಲಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇ.ಡಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.