ಬೆಂಗಳೂರು : ಜಾತಿಗಣತಿ ವರದಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಅವರು ನೇರವಾಗಿ ಸವಾಲ್ ಹಾಕಿದ್ದು, ನಾವಾ ನೀವಾ ನೋಡೇ ಬಿಡೋಣ ಎಂದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬನ್ನಿ ಬೀದಿಗಿಳಿದು ಹೋರಾಟ ಮಾಡೋಣ, ನಾವು ಸಂಘರ್ಷಕ್ಕೆ ರೆಡಿ ಇದ್ದೇವೆ ಎಂದು ಶಾಮನೂರು ಅವರೊಂದಿಗೆ ಸಂಘರ್ಷಕ್ಕೆ ಕರೆ ಕೊಟ್ಟರು.
ಶಾಮನೂರು ಅವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರಾಮಚಂದ್ರ, ಅವನೊಬ್ಬ ಶಾಸಕ ಮಾತಾಡಿದ್ದಾನೆ, ಅವನು ವಿಧಾನಸಭೆಯಲ್ಲೆ ಹಿರಿಯ ಶಾಸಕ, ಅವನು ಮಾತಾಡಿದ್ದು ನೋಡಿದ್ದೀರಾ? ಬನ್ನಿ, ನಾವಾ ನೀವಾ ನೋಡೇ ಬಿಡೋಣ ಎಂದರು.
ನಮಗೆ ಇಷ್ಟು ವರ್ಷ ಮೋಸ ಮಾಡಿಕೊಂಡು ಬಂದಿದ್ದೀರಿ, ಜಾತಿ ಜನಗಣತಿಗೆ ಯಾರು ವಿರೋಧ ಮಾಡುತ್ತಿದ್ದಾರೋ ಅವರು ಇದುವರೆಗೂ ಲೂಟಿ ಮಾಡಿಕೊಂಡೇ ಬಂದಿದ್ದಾರೆ, ನಾಡಿನ ಸಂಪತ್ತನ್ನು ಲೂಟಿ ಮಾಡಿಕೊಂಡೇ ಬಂದಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನೇಮಕ ಆದ ಹಿಂದುಳಿದ ಜಾತಿಗಳ ಎಲ್ಲ ವರದಿಯನ್ನು ವಿರೋಧ ಮಾಡಿಕೊಂಡು ಬಂದ ಜನ ಇವರು, ಹಿಂದುಳಿದ ಜಾತಿಗಳಿಗೆ ರೂಪಿಸುವ ಕಾರ್ಯಕ್ರಮಕ್ಕೆ ದ್ರೋಹ ಮಾಡಿ ನಮ್ಮ ತಟ್ಟೆಯ ಅನ್ನ ಕಸಿದುಕೊಂಡು ತಿನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವರದಿಯನ್ನು ಚರ್ಚೆಗೆ ಬಿಡಿ, ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬಿಡಿ, ಒಂದು ವೇಳೆ ವರದಿ ಶಿಫಾರಸು ಅನುಷ್ಟಾನ ಆಗಿಲ್ಲ ಅಂದ್ರೆ ಬೀದಿ ಹೋರಾಟ ಮಾಡುತ್ತೇವೆ ಎಂದರು.

ಮೂರು ಜಾತಿಗಳು ಒಟ್ಟಾಗಿ ಹೋರಾಟ ಮಾಡ್ತೇವೆ ಅಂತ ಶಾಮನೂರು ಹೇಳಿದ್ದಾರೆ, ಆ ಮೂರು ಜಾತಿಗಳ ಜನ ಇರೋದು ಕೇವಲ 25%-30% ಮಾತ್ರ, ನಾವು ಇದ್ದೇವೆ 70% ಜನರು, ನಾಲ್ಕರಿಂದ ಐದು ಕೋಟಿ ಜನ ನಾವಿದ್ದೇವೆ, ಸರ್ಕಾರದ ವಿರುದ್ದವೂ ಕೂಡ ಸಿಎಂ ಯಾರೇ ಆಗಿರಲಿ ನಾವು ಹೋರಾಟಕ್ಕೆ ರೆಡಿ ಇದ್ದೇವೆ ಎಂದರು.
ನಾವು ಸೌಮ್ಯವಾಗಿ ಹೋರಾಟ ಮಾಡುತ್ತಿದ್ದೇವೆ, ರಾಜ್ಯದ ಅಧಿಕಾರ ಅನುಭವಿಸಿದ ವ್ಯಕ್ತಿ ಏನ್ ಹೇಳಿದ್ದಾನೆ, ಅವರು ಹಾಗೇನಾದರೂ ಬಂದಿದ್ದೇ ಆದರೆ ನಾವೂ ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ನಾವೂ ರೆಡಿ ಇದ್ದೇವೆ ಎಂದು ನೇರವಾಗಿ ಸವಾಲ್ ಹಾಕಿದರು.




