ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ರಾಜ್ಯಸಭೆ ಮತದಾನದ ವೇಳೆ ರಾಜ್ಯ ಸಭೆ ಕಾಂಗ್ರೆಸ್ ಸದಸ್ಯ ನಾಸೀರ್ ಹುಸೇನ್ ಪರ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ನಾಸಿರ್ ಹುಸೇನ್ ಪರ ಘೋಷಣೆ ಕೂಗುತ್ತಿದ್ದಾಗ ಪಾಕ್ ಪರ ಘೋಷಣೆ ಕೂಗಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಇಲ್ತಾಜ್, ಮುನಾವರ್ ಮತ್ತು ಮೊಹಮ್ಮದ್ ನಾಶಿಪುಡಿ ಅವರನ್ನು ಬಂಧಿಸಿ, ಕೋರಮಂಗಲದಲ್ಲಿರುವ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ಮೂವರು ಆರೋಪಿಗಳಿಗೆ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.
ಪಾಕ್ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳ ಬಂಧನವನ್ನು ಖಚಿತಪಡಿಸಿರುವ ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಎಫ್ ಎಸ್ ಎಲ್ ವರದಿ, ಆರೋಪಿಗಳ ಹೇಳಿಕೆ ಹಾಗೂ ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಲ್ಲಿ ಇಲ್ತಾಜ್ ದೆಹಲಿ ಮೂಲ, ಮುನಾವರ್ ಆರ್ ಟಿ ನಗರ ಮತ್ತು ಮೊಹಮದ್ ಶಫಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿಯವರಾಗಿದ್ದಾರೆ.