ಹಾವೇರಿ: ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿಯ ಮೆಣಸಿನಕಾಯಿ ವರ್ತಕ ಶಫಿ ನಾಶಿಪುಡಿ ಬಂಧನವಾಗುತ್ತಿದ್ದಂತೆಯೇ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿರುವ ನಾಸಿಪುಡಿ ಮನೆಯಲ್ಲಿ ನೀರವ ಮೌನ ಆವರಿಸಿದೆ.

ಮನೆಯಿಂದ ಹೊರಗೆ ಬಾರದ ಅವರ ಕುಟುಂಬ ಸದಸ್ಯರು, ಗೇಟ್ ಗೆ ಬೀಗ ಹಾಕಿಕೊಂಡು ಮನೆಯ ಒಳಗಡೆ ವಾಸವಾಗಿದ್ದಾರೆ. ಮನೆಯಲ್ಲಿನ ಲೈಟ್ ಆಫ್ ಮಾಡಿ ಕತ್ತಲೆಯಲ್ಲಿಯೇ ಅವರ ಕುಟುಂಬದ ಸದಸ್ಯರು ಕುಳಿತಿದ್ದಾರೆ.
ನಾಶಿಪುಡಿ ಬ್ಯಾಡಗಿ ಕಾಂಗ್ರೆಸ್ ಮುಖಂಡನಾಗಿದ್ದಾನೆ. ಈ ಸಂಬಂಧ ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಹೇಳಿಕೆ ನೀಡಿದ್ದು, ಸುಮಾರು 50 ವರ್ಷದಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಬಡತನದಿಂದ ಬಂದ ಶಫಿ, ಇದೀಗ ಜಿಲ್ಲೆಯಲ್ಲಿ ದೊಡ್ಡ ವ್ಯಾಪಾರಿಯಾಗಿದ್ದಾನೆ.

ಕೋಟ್ಯಾಂತರ ರೂಪಾಯಿ ಮೆಣಸಿನಕಾಯಿ ವ್ಯಾಪಾರ ಮಾಡುವ ಇವರು, ಇಂತಹ ಪ್ರಕರಣದಲ್ಲಿ ಭಾಗಿಯಾಗಿರೋ ಉದಾಹರಣೆ ಅಂತು ನಮಗಿಲ್ಲ ಎಂದು ಸುರೇಶಗೌಡ ತಿಳಿಸಿದ್ದಾರೆ.
ಶಫಿ ನಾಶೀಪುಡಿ ನಮ್ಮ ಬಳಿ ಇದ್ದು ಬೆಳೆದ ಹುಡುಗನಾಗಿದ್ದಾನೆ, ಮಾಧ್ಯಮದಲ್ಲಿ ಬಂಧನವಾಗಿದೆ ಎಂಬ ಸುದ್ಧಿ ನೋಡಿದೆ, ಗುರುವಾರ ದಿನ ಬ್ಯಾಡಗಿ ವರ್ತಕ ಸಂಘದ ಸಭೆ ಕರೆದು ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.