ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಸುದ್ದಿಯಾಗಿರುವುದು 110 ಕೋಟಿ ರೂಪಾಯಿ ಹಣ ದುರುಪಯೋಗ ಆರೋಪ. ನೀರುಗಾಲುವೆ ವಿಭಾಗದಲ್ಲಿ 110 ಕೋಟಿ ರೂಪಾಯಿ ಹಣದ ದಾಖಲೆಗಳೇ ನಾಪತ್ತೆಯಾಗಿವೆ ಎಂಬ ಕಾರಣಕ್ಕೆ ಇದೀಗ ಸುದ್ದಿಯಲ್ಲಿದೆ.

ದಾಖಲೆ ನಾಪತ್ತೆಗೆ ಬಿಬಿಎಂಪಿ ಅಧಿಕಾರಿಗಳೇ ಹೊಣೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಬಿಎಂಪಿಯಲ್ಲಿ 110 ಕೋಟಿ ರೂಪಾಯಿ ಭ್ರಷ್ಟಾಚಾರವೆಸಗಿ, ಕೋಟಿ ಕೋಟಿ ರೂಪಾಯಿ ಹಣವನ್ನು ಗುಳುಂ ಮಾಡಿ ನೀರುಗಾಲುವೆ ಅಧಿಕಾರಿಗಳ ಕಳ್ಳಾಟವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಾಡದೇ ಇರುವ ಕೆಲಸಕ್ಕೆ 110 ಕೋಟಿ ಹಣ ಬಿಡುಗಡೆ ಮಾಡಿ, ಅಧಿಕಾರಿಗಳು ಹಣ ನುಂಗಿ ನೀರು ಕುಡಿದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಪಾಲಿಕೆಯ ನೀರುಗಾಲುವೆ ವಿಭಾಗದ 110 ಕೋಟಿ ಕಾಮಗಾರಿ ಹೆಸರಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಕೆಲಸ ಮಾಡದೇ ಹಣ ಬಿಡುಗಡೆ ಆರೋಪ ಕೇಳಿಬಂದಿತ್ತು.

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಕಡತಗಳೇ ನಾಪತ್ತೆ ಮಾಡಿದ್ದಾರೆ ಎಂಬ ಸಂಶಯ ಇದೀಗ ಮೂಡಿದೆ.
ನೀರುಗಾಲುವೆಗಳ ನಿರ್ವಹಣೆಗೆ ವಾರ್ಷಿಕ ಇಪ್ಪತ್ತೈದು ಕೋಟಿ ರೂಗಳಂತೆ ಗುತ್ತಿಗೆಗೆ ನೀಡಲಾಗಿತ್ತು, ಕಳೆದ 3 ವರ್ಷದಲ್ಲಿ ನೂರ ಹತ್ತು ಕೋಟಿ ನೀಡಿದೆ. ಯೋಗಾ ಎಂಬ ಕಂಪೆನಿಗೆ ಬಿಲ್ ಗಳ ರೂಪದಲ್ಲಿ ಪಾವತಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆದ್ರೆ ಯಾವುದೇ ಕಾಮಗಾರಿ ನಡೆಸದೇ ಹಣ ಬಿಡಗಡೆ ಮಾಡಿರುವ ಅಧಿಕಾರಿಗಳು, ಇದು ಕಾನೂನು ಬಾಹಿರವಾಗಿ ಹಣ ಪಾವತಿ ಆಗಿದೆ ಎಂದ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ದೂರುದಾರರು ಪತ್ರ ಬರೆದಿದ್ದಾರೆ.
ನೀರುಗಾಲುವೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಕಡತ ನಾಪತ್ತೆ ಆಗಲು ಹೇಗೆ ಸಾಧ್ಯ ಎಂದು ದೂರಿನ ಮೂಲಕ ಆಗ್ರಹಿಸಿರುವ ಅವರು, ಡಿಸಿಎಂ ಡಿಕೆಶಿವಕುಮಾರ್ ಅವರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದರ ಜತೆಯಲ್ಲಿಯೇ ಲೋಕಾಯುಕ್ತಕ್ಕೂ ಸಾಮಾಜಿಕ ಕಾರ್ಯಕರ್ತ ಅಮರೇಶ್ ದೂರು ನೀಡಿದ್ದಾರೆ.