ಬೆಂಗಳೂರು : ರಾಜ್ಯದ ವನ್ಯಜೀವಿಗಳ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಸಲಹೆ ನೀಡಬೇಕಾದ ರಾಜ್ಯ ವನ್ಯಜೀವಿ ಮಂಡಳಿಯನ್ನು ರಚಿಸದೆಯೇ ಕೇವಲ ಸರ್ಕಾರೀ ಅಧಿಕಾರಿಗಳನ್ನು ಹೊಂದಿದ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಅಲ್ಲದೆ ಸ್ಥಾಯೀ ಸಮಿತಿಯಲ್ಲಿ ಅಧಿಕಾರೇತರ ಸದಸ್ಯರನ್ನು ಕಡ್ಡಾಯವಾಗಿ ನೇಮಿಸಬೇಕಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಅರಣ್ಯ ಮಂತ್ರಿಗಳು ಮತ್ತು ಅಧಿಕಾರಿಗಳಿರುವ ಸ್ಥಾಯೀ ಸಮಿತಿಯ ಸಭೆ ಇಂದು ಆರಂಭವಾಗಿದೆ. ಸಂರಕ್ಷಿತ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವನ್ಯಜೀವಿ ಅನುಮೋದನೆ ಬಾಕಿ ಇರುವ ಹಲವಾರು ಯೋಜನೆಗಳ ಪ್ರಸ್ತಾವನೆಗಳು ಸ್ಥಾಯೀ ಸಮಿತಿಯ ಮುಂದೆ ಬರಲಿವೆ.

ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ, 2022 ರ ಪ್ರಕಾರ ಮುಖ್ಯಮಂತ್ರಿಗಳು ಅಧ್ಯಕ್ಷರಿರುವ ಮತ್ತು ಅರಣ್ಯ ಮಂತ್ರಿಗಳು ಉಪಾಧ್ಯಕ್ಷರಿರುವ, ಅಧಿಕಾರಿಗಳು ಹಾಗೂ ಅಧಿಕಾರೇತರ ಸದಸ್ಯರಿರುವ ವನ್ಯಜೀವಿ ಮಂಡಳಿಯನ್ನು ರಚಿಸಬೇಕಾದುದು ಕಡ್ಡಾಯ. ಹಾಗೆಯೇ ಅರಣ್ಯ ಮಂತ್ರಿಗಳು ಅಧ್ಯಕ್ಷರಿರುವ ಸ್ಥಾಯೀ ಸಮಿತಿಗೆ ವನ್ಯಜೀವಿ ಮಂಡಳಿಯ ಕೆಲ ಅಧಿಕಾರೇತರ ಸದಸ್ಯರನ್ನು ನಾಮ ನಿರ್ದೇಶನ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಈ ಎಲ್ಲ ನಿಯಮಗಳನ್ನು ರಾಜ್ಯ ಸರಕಾರ ಗಾಳಿಗೆ ತೂರಿದೆ.
ಹಿಂದಿನ ಸರ್ಕಾರದಲ್ಲಿ ರಚಿಸಲಾಗಿದ್ದ ವನ್ಯಜೀವಿ ಮಂಡಳಿಯ ಅವಧಿ ಕಳೆದ ವರ್ಷ ಅಕ್ಟೋಬರ್ ಮೂರನೇ ವಾರದಲ್ಲಿಯೇ ಮುಗಿದಿದೆ. ಐದು ತಿಂಗಳುಗಳು ಕಳೆದರೂ ಮತ್ತು ರಾಜ್ಯದಲ್ಲಿ ಮಾನವ ವನ್ಯಜೀವಿ ಸಂಘರ್ಷ ಮಿತಿ ಮೀರಿದ್ದರೂ ಸಹ ರಾಜ್ಯ ಸರ್ಕಾರ ವನ್ಯಜೀವಿ ಮಂಡಳಿಯನ್ನು ರಚಿಸಿಲ್ಲ. ಇವೆಲ್ಲದರ ಮಧ್ಯೆ ತರಾತುರಿಯಲ್ಲಿ ಅಧಿಕಾರೇತರ ಸದಸ್ಯರಿರದ ಕೇವಲ ಸರ್ಕಾರೀ ಅಧಿಕಾರಿಗಳಿರುವ ಸ್ಥಾಯೀ ಸಮಿತಿಯನ್ನು ರಚಿಸಿ ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ಯೋಜನೆಗಳಿಗೆ ಅನುಮೋದನೆ ನೀಡಲು ತರಾತುರಿಯಲ್ಲಿ ಸಭೆ ನಡೆಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ತೀರಾ ದುರದೃಷ್ಟಕರ ಮತ್ತು ಕಾನೂನುಬಾಹಿರ.
ಇಂದು ಸಭೆ ಸೇರಲಿರುವ ಸ್ಥಾಯೀ ಸಮಿತಿಯು ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡಬಾರದು ಹಾಗೂ ರಾಜ್ಯ ಮಂಡಳಿಯನ್ನು ಸರ್ಕಾರವು ತಕ್ಷವೇ ರಚಿಸಬೇಕೆಂದು ವನ್ಯಜೀವಿ ಸಂರಕ್ಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಲ್ಲದೆ ಕೇವಲ ಸರ್ಕಾರೀ ಅಧಿಕಾರಿಗಳು ಸದಸ್ಯರಿರುವ ಸ್ಥಾಯೀ ಸಮಿತಿಯನ್ನು ರಚಿಸಿ ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರವು ಕೂಡಲೇ ಹಿಂಪಡೆಯಬೇಕಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.




