ಪಂಜಾಬ್ : ಮುಂಬರು ಪಂಚರಾಜ್ಯಗಳ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯನ್ನು ನಡೆಸಲು ಆರಂಭ ಮಾಡಿವೆ. ಬಿಜೆಪಿ ಈ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಳೆದ ಒಂದು ವರ್ಷದಿಂದ ಹಲವಾರು ರೈತರ ಸಾವಿಗೆ ಕಾರಣವಾಗಿದ್ದ ಮೂರು ಕೃಷಿ ತಿದ್ದುಪಡಿ ಮಸೂದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿತ್ತು. ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಈ ಘೋಷಣೆ ಮಾಡಿ ಮುಂಬರುವ ಅಧಿವೇಶನದಲ್ಲಿ ಹಿಂಪಡೆಯಲಾಗುವುದು ಎಂದು ಪ್ರಕಟಿಸಿದ್ದರು.
ಈಗ ಆಮ್ ಆದ್ಮಿ ಪಾರ್ಟಿ ಸರದಿ, ಮುಂಬರುವ 2022ರ ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು(AAP) ಅಧಿಕಾರಕ್ಕೆ ಬಂದರೆ, 18ವರ್ಷ ಮೀರಿದ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.

ವೃದ್ದಾಪ್ಯ ವೇತನ ಪಡೆಯುತ್ತಿರುವ ಮಹಿಳೆಯರಿಗೂ ಹೆಚ್ಚುವರಿಯಾಗಿ ಈ ಸೌಲಭ್ಯ ದೊರೆಯಲಿದೆ ಎಂದು ಅವರು ಪ್ರಕಟಿಸಿದ್ದಾರೆ.
ಕಳೆದ ಬಾರಿ ಉಚಿತ ವಿದ್ಯುತ್ ಘೋಷಿಸಿದ್ದ ಆಪ್
ಕಳೆದ ಬಾರಿಯ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷವು ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಅಧಿಕಾರ ಪಡೆಯಲು ಮುಂದಾಗಿರುವ ಪಕ್ಷ ಈಗಾಗಲೇ ಕಾರ್ಯಕರ್ತರನ್ನು ಸನ್ನದ್ದಗೊಳಿಸುತ್ತಿದೆ.
ಈ ಹಿಂದೆ ಅವರು ಪಂಜಾಬ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, 300 ಯೂನಿಟ್ ಗಳಷ್ಟು ಉಚಿತ ವಿದ್ಯುತ್, ಉಚಿತ ಔಷಧಿ ಹಾಗೂ ಉಚಿತ ಚಿಕಿತ್ಸೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.




