ಬಸವಕಲ್ಯಾಣ: ಬಸವಣ್ಣನವರು ತಮ್ಮ ರಾಜಕೀಯಕ್ಕೆ ಮಾದರಿ ಎಂದು ಘೋಷಿಸಿಕೊಂಡ, ಅದನ್ನೇ ಪಾಲಿಸುತ್ತಿರುವ ಏಕೈಕ ನಾಯಕರು ನಮ್ಮೆಲ್ಲರ ಅಭಿಮಾನದ ಸಂಕೇತ ಅವರೇ ಸಿಎಂ ಸಿದ್ದರಾಮಯ್ಯನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತಾ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದು ಏಕೈಕ ನಾಯಕ ಸಿದ್ದರಾಮಯ್ಯನವರು, ಮಹಿಳಾ ವಿವಿಗೆ ಅಕ್ಕ ಮಹಾದೇವಿ ಹೆಸರಿಟ್ಟಿದ್ದು ಏಕೈಕ ನಾಯಕ ಸಿದ್ದರಾಮಯ್ಯನವರು, ಬಸವ ತತ್ವದ ಆಧಾರದಲ್ಲಿ ಅನ್ನ ಭಾಗ್ಯ ಸೇರಿ ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದು ಸಾರಿದವರು ಏಕೈಕ ನಾಯಕ ಸಿದ್ದರಾಮಯ್ಯ.
ಅನುಭವ ಮಂಟಪದಲ್ಲಿ 12 ನೇ ಶತಮಾನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಬಸವಣ್ಣನವರು ಘೋಷಿಸಿದರು. ಬಸವಣ್ಣನವರು ಮಾಡಿದ ಘೋಷಣೆಗೆ ಆಧುನಿಕ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಮುದ್ರೆ ಒತ್ತಿದ ಏಕೈಕ ನಾಯಕ ಧೀಮಂತ ನಾಯಕ, ಬಸವಣ್ಣನವರ ಅಪ್ಪಟ ಅನುಯಾಯಿ ಸಿದ್ದರಾಮಯ್ಯ ಅವರು ಎಂದು ಅನುಭವ ಮಂಟಪದ ಅಧ್ಯಕ್ಷರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಗೋ.ರೂ.ಚ ಅವರು, ಸಮಾಜದಲ್ಲಿ ಧರ್ಮ, ದೇವರ ಹೆಸರಲ್ಲಿ ಅಂದಶ್ರದ್ದೆ, ದ್ವೇಷದ ವಾತಾವರಣ ಹೆಚ್ಚಿಸುತ್ತಿರುವುದು ಬೇಸರದ ಸಂಗತಿ ಎಂದರು.
ಸಿದ್ದರಾಮಯ್ಯ ಅವರು ನಾಡಿನ ಇತಿಹಾಸದಲ್ಲಿ ಅಪೂರ್ವ ಘೋಷಣೆ ಮಾಡಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು, ಬಸವ ಸಿದ್ದಾಂತದಲ್ಲಿ ಸಿದ್ದರಾಮಯ್ಯ ಅವರು ಇಟ್ಟಿರುವ ಬದ್ಧತೆ ಕಾರಣಕ್ಕೆ, ಸಾಮಾಜಿಕ ನ್ಯಾಯದ ಪರ ಇವರು ಬದ್ಧತೆ ಕಾರಣಕ್ಕೆ ಸಿದ್ದರಾಮಯ್ಯ ಅವರ ದಿಟ್ಟತನಕ್ಕಾಗಿ ನಮಗೆ ಇವರ ಬಗ್ಗೆ ಹೆಮ್ಮೆ ಇದೆ ಎಂದರು.




