ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಾಚಾರಕ್ಕೆ ಒಳಗಾದ ಇಬ್ಬರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ತಂದೆಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯಿಂದ ಬೇಸತ್ತು ಉತ್ತರ ಪ್ರದೇಶದ ಬಿಜೆಪಿ ನೇತೃತ್ವ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಉತ್ತರಪ್ರದೇಶ ಇದೀಗ ಜಂಗಲ್ ರಾಜ್ ನಂತೆ ಭಾಸವಾಗುತ್ತಿದೆ. ಇಲ್ಲಿ ಮಹಿಳೆಯರು ವಾಸಿಸುತ್ತಿರುವುದೇ ದೊಡ್ಡ ಅಪರಾಧವೆಂಬಂತಿದೆ, ಇದೀಗ ಇಲ್ಲಿ ಸುರಕ್ಷತೆಯ ಪ್ರಶ್ನೆ ಕಾಡುತ್ತಿದೆ ಎಂದು ಪ್ರಿಯಾಂಕಾ ಕಳವಳ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಕುಟುಂಬದವರನ್ನು ರಾಜಿ ಮಾಡಿಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಮಹಿಳೆಯರು ನ್ಯಾಯ ಕೇಳಿದರೆ ಅವರನ್ನು ನಿರ್ನಾಮ ಮಾಡುವ ಕೃತ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಘಟಂಪುರದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಪಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಕಾರ್ಖಾನೆ ಮಾಲೀಕ ಸೇರಿದಂತೆ ಇತರರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು. ನಂತರ ಇಬ್ಬರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.




