ಬೆಂಗಳೂರು : ರಾಜ್ಯದಲ್ಲಿ ತೀವ್ರತರವಾದ ಬರಗಾಲ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ಮಿತಬಳಕೆ ಕ್ರಮ ಕೈಗೊಂಡಿದ್ದು, ಕೆಲವು ನಿರ್ಬಂಧಗಳನ್ನು ವಿಧಿಸಿದೆ.
ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಮತ್ತು ಬಂದುಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯಿದ್ದು, ಎಲ್ಲಾರಿಗೂ ಕುಡಿಯುವ ನೀರನ್ನು ಸರಬರಾಜು ಮಾಡುವುದು ಅವಶ್ಯಕವಾಗಿರುತ್ತದೆ.
ಪ್ರಸ್ತುತ ನಗರದಲ್ಲಿ ಉಷ್ಣಾಂಶ ಏರುತ್ತಿದ್ದು, ಮಳೆಯ ಕೊರತೆಯಿಂದ ಅಂತರ್ಜಲ ಕುಸಿಯುತ್ತಿದೆ.

ಆದ್ದರಿಂದ ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ನೀರನ್ನು ಮಿತವಾಗಿ ಬಳಸುವಂತೆ ಸೂಚಿಸಿದೆ. ಆದ್ದರಿಂದ ವಾಹನಗಳ ಸ್ವಚ್ಚತೆ, ಕೈದೋಟಕ್ಕೆ ನೀರು, ಕಟ್ಟಣ ನಿರ್ಮಾಣಕ್ಕೆ ನೀರು, ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ನೀರು. ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರ ಬಳಕೆ ಹಾಗೂ ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ನೀರನ್ನು ಬಳಸದೇ ಇರಲು ಸೂಚಿಸಲಾಗಿದ್ದು, ಇವುಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಮೇಲ್ಕಂಡ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು, ಹಾಗೆಯೇ ಇದು ಮತ್ತೆ ಮರುಕಳಿಸಿದ್ದಲ್ಲಿ ದಂಡ ಮೊತ್ತ ಐದು ಸಾವಿರ ರೂಪಾಯಿ ಜತೆ ಹೆಚ್ಚುವರಿಯಾಗಿ 500 ರೂಪಾಯಿ ದಂಡವನ್ನು ಪ್ರತಿದಿನದಂತೆ ವಿಧಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.
ಯಾರಾದರೂ ಈ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಲ್ಲಿ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916 ಕ್ಕೆ ತಿಳಿಸಲು ಮನವಿ ಮಾಡಲಾಗಿದೆ.