RAMESHWARAM CAFE REOPENED ON MAHA SHIVARATI DAY: ಒಂದು ವಾರದ ನಂತರ ಪುನಾರಂಭಗೊಂಡ ರಾಮೇಶ್ವರಂ ಕೆಫೆ: ಗ್ರಾಹಕರ ತೀವ್ರ ತಪಾಸಣೆ

ಬೆಂಗಳೂರು : ಬಾಂಬ್ ಸ್ಪೋಟದಿಂದ ಮುಚ್ಚಲಾಗಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಮತ್ತೆ ಇಂದಿನಿಂದ ಕಾರ್ಯಾರಂಭ ಮಾಡಿದೆ. ಶಿವರಾತ್ರಿ ದಿನದಂದೆ ಕೆಫೆಯನ್ನು ಪುನಾರಂಭ ಮಾಡುವುದಾಗಿ ಘೋಷಿಸಿತ್ತು. ಅದರಂತೆಯೇ ಇಂದಿನಿಂದ ಕೆಫೆ ಪುನಾರಂಭವಾಗಿದ್ದು, ಬೆಳಿಗ್ಗೆಯಿಂದಲೇ ಕೆಫೆಯಲ್ಲಿ ಪೂಜಾ ಕಾರ್ಯಗಳನ್ನು ನೇರವೇರಿಸಲಾಯಿತು.
ಪೊಲೀಸರ ಕಣ್ಗಾವಲಿನಲ್ಲಿ ಪೂಜಾ ಕಾರ್ಯ ನೇರವೇರಿಸಿದ ರಾಮೇಶ್ವರಂ ಕೆಫೆ ಆಡಳಿತ ಮಂಡಳಿ, ಪೂಜೆ ಬಳಿಕ ಹೋಟೆಲ್ ಅನ್ನು ಸಾರ್ವಜನಿಕರಿಗಾಗಿ ಓಪನ್ ಮಾಡಲಾಯಿತು. ಕೆಫೆಯ ಪ್ರವೇಶ ದ್ವಾರದ ಬಳಿ ಎರಡು ಮೆಟಲ್ ಡಿಟೆಕ್ಟರ್ ಅನ್ನು ಅಳವಡಿಸಲಾಗಿದ್ದು, ಹಾಗೆಯೇ ಪ್ರತಿಯೊಬ್ಬ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿತ್ತು.

ಕೆಫೆಯ ಸುತ್ತ ಅಳವಡಿಸಲಾಗಿದ್ದ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದ್ದು, ವ್ಯಾಪಾರವನ್ನು ಆರಂಭಿಸಿದ್ದಾರೆ. ತಿಂಡಿ, ತಿನಿಸುಗಳನ್ನು ತಿನ್ನಲು ಬಂದಿದ್ದ ಪ್ರತಿಯೊಬ್ಬ ಗ್ರಾಹಕರು ಕೂಡ ಬಾಂಬ್ ಬ್ಲಾಸ್ಟ್ ಬಗೆಗಿನ ಸುದ್ದಿಯನ್ನು ಮೆಲುಕು ಹಾಕುತ್ತಿದ್ದರು.
ಶಂಕಿತ ಉಗ್ರನ ತೀವ್ರ ವಿಚಾರಣೆ
ಮತ್ತೊಂದೆಡೆ ಕೆಫೆಯಲ್ಲಿ ಬಾಂಬ್ ಇಟ್ಟ ವ್ಯಕ್ತಿಯ ಶೋಧ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಬಳ್ಳಾರಿ, ಭಟ್ಕಳ ಸೇರಿದಂತೆ ಅನೇಕ ಪ್ರದೇಶದಲ್ಲಿ ಆರೋಪಿ ಓಡಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನ ಪತ್ತೆಗಾಗಿ ಎನ್ ಐಎ ಮತ್ತು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನೊಂದೆಡೆ ಈ ಸ್ಪೋಟಕ್ಕೆ ಸಂಚು ರೂಪಿಸಿದ್ದಾರೆ ಎಂಬ ಅನುಮಾನದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ ನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಈತ ಬಳ್ಳಾರಿ ಜೈಲಿನಲ್ಲಿದ್ದುಕೊಂಡೆ ಸಂಚು ರೂಪಿಸಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

More News